Friday, January 3, 2025

ಪ್ರಭಾಸ್ ಜೊತೆ ಪ್ರಮೋದ್.. ನಿಲ್ಲದ ಕನ್ನಡಿಗರ ದರ್ಬಾರ್..!

ಕನ್ನಡ ಸಿನಿಮಾಗಳು ಬಾಕ್ಸ್ ಆಫೀಸ್ ಆಳುತ್ತಿದ್ರೆ, ಕನ್ನಡ ಟೆಕ್ನಿಷಿಯನ್ಸ್ ಹಾಗೂ ಆರ್ಟಿಸ್ಟ್​ಗಳು ಪರಭಾಷಾ ಚಿತ್ರರಂಗಗಳ ಮೇಲೆ ಅಧಿಪತ್ಯ ಸಾಧಿಸ್ತಿದ್ದಾರೆ. ಯೆಸ್.. ಕೆಜಿಎಫ್​ನಿಂದ ಕನ್ನಡದ ಕೋಟೆ ಕೊತ್ತಲುಗಳು ಭಾರತೀಯ ಚಿತ್ರರಂಗದ ಉದ್ದಗಲಕ್ಕೆ ವಿಸ್ತಿರಿಸಲ್ಪಟ್ಟಿದೆ. ಇದೀಗ ಡಾರ್ಲಿಂಗ್ ಪ್ರಭಾಸ್ ಜೊತೆ ಕನ್ನಡದ ಪ್ರತಿಭಾನ್ವಿತ ನಟ ಪ್ರಮೋದ್ ಬಣ್ಣ ಹಚ್ಚಿದ್ದಾರೆ.

  • ಸಲಾರ್​ನಲ್ಲಿ ಬಾಂಡ್ ರವಿ ಗತ್ತು.. ನೀಲ್ ಮೇಕಿಂಗ್ ಗಮ್ಮತ್ತು
  • ಪ್ರಮೋದ್ ಆ್ಯಕ್ಟಿಂಗ್ ಮೆಚ್ಚಿ ಪಾತ್ರ ವಿಸ್ತರಿಸಿದ KGF ಸಾರಥಿ
  • ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್- ಪ್ರಭಾಸ್​ಗೆ ಇವ್ರೇ ವಿಲನ್

ಡಾಲಿ ಜೊತೆ ರತ್ನನ್ ಪ್ರಪಂಚ ಚಿತ್ರದಿಂದ ಉಡಾಳ್ ಬಾಬು ಆಗಿ ಕನ್ನಡ ಚಿತ್ರರಂಗದ ಮೆಚ್ಚುಗೆಗೆ ಪಾತ್ರವಾದ ಕಲಾವಿದ ಅಂದ್ರೆ ಅದು ಪ್ರಮೋದ್. ಹೌದು.. ಮದ್ದೂರು ಮೂಲದ ಈ ಪ್ರತಿಭೆ ಯಾವುದೇ ಪಾತ್ರ ಕೊಟ್ಟರೂ ನೀರು ಕುಡಿದಷ್ಟೇ ಸಲೀಸಾಗಿ ನಟಿಸಿಬಿಡ್ತಾರೆ. ಇದೀಗ ಇವ್ರಲ್ಲಿ ಸೂಪರ್ ಸ್ಟಾರ್ ಆಗೋ ಬೀಜವನ್ನು ಬಿತ್ತಿದ್ದಾರೆ ಕೆಜಿಎಫ್ ಮಾನ್​ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್.

ಯೆಸ್.. ಕೆಜಿಎಫ್ ಬಳಿಕ ನೀಲ್ ಕೈ ಹಾಕಿರೋ ಸಲಾರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಇದು ಬಾಹುಬಲಿ ಪ್ರಭಾಸ್ ಕರಿಯರ್​ನ ಬಿಗ್ಗೆಸ್ಟ್ ಆ್ಯಕ್ಷನ್ ವೆಂಚರ್ ಆಗಲಿದ್ದು, ನೀಲ್ ಹೊಸ ಪ್ರಪಂಚ ಸೃಷ್ಟಿಸಿದ್ದಾರೆ. ಚಿತ್ರದ ಒಂದೊಂದು ಸ್ಟಿಲ್ ಕೂಡ ನೋಡುಗರ ನಾಡಿಮಿಡಿತ ಹೆಚ್ಚಿಸ್ತಿದೆ. ಸಾಲದು ಅಂತ ಮಲಯಾಳಂನ ಪೃಥ್ವಿರಾಜ್ ಸುಕುಮಾರ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸದ್ಯ ಭಾರತೀಯ ಚಿತ್ರರಂಗದಲ್ಲಿ ಕನ್ನಡಿಗರೇ ಸಾರ್ವಭೌಮ ಅನ್ನುವಂತಾಗಿದೆ. ಸಲಾರ್ ಸಿನಿಮಾಗೆ ನೀಲ್ ಆ್ಯಕ್ಷನ್ ಕಟ್ ಹೇಳಿದ್ರೆ, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡ್ತಿದೆ. ಇದೀಗ ಸಲಾರ್ ಸೆಟ್​ಗೆ ಮತ್ತೊಬ್ಬ ಕನ್ನಡಿಗ ಪ್ರಮೋದ್ ಕೂಡ ಎಂಟ್ರಿ ಕೊಟ್ಟಿರೋದು ವೆರಿ ವೆರಿ ಇಂಟರೆಸ್ಟಿಂಗ್ ಅನಿಸಿದೆ. ಪ್ರಮೋದ್​ರ ಬಾಂಡ್ ರವಿ ಸಿನಿಮಾ ಮುಂದಿನ ತಿಂಗಳು ರಿಲೀಸ್​ಗೆ ಸಜ್ಜಾಗಿದ್ದು, ಅದಕ್ಕೂ ಮುನ್ನ ಪ್ರಭಾಸ್ ಜೊತೆ ನಟಿಸೋ ಅವಕಾಶ ಪಡೆದಿರೋದು ಖುಷಿಯ ವಿಚಾರ.

ಗೀತಾ ಬ್ಯಾಂಗಲ್ ಸ್ಟೋರ್​ನಿಂದ ಶುರುವಾದ ಪ್ರಮೋದ್ ಸಿನಿಯಾನ, ಮತ್ತೆ ಉದ್ಭವ, ಜಗ್ಗೇಶ್ ಜೊತೆಗಿನ ಪ್ರೀಮಿಯರ್ ಪದ್ಮಿನಿ ಹೀಗೆ ಸಾಲು ಸಾಲು ಸಿನಿಮಾಗಳಿಂದ ನೋಡುಗರ ಮನಸ್ಸು ಗೆದ್ದಿದ್ದಾರೆ. ಸದ್ಯ ಬಾಂಡ್ ರವಿ ಹಾಗೂ ಇಂಗ್ಲಿಷ್ ಮಂಜ ಚಿತ್ರಗಳು ರಿಲೀಸ್​ಗೆ ತಯಾರಾಗ್ತಿದ್ದು, ಪಮೋದ್ ಕರಿಯರ್​ಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ ಪ್ರಶಾಂತ್ ನೀಲ್.

ಸಲಾರ್​ಗೆ ಆಫರ್ ಬರ್ತಿದ್ದಂತೆ ತೆಲುಗು ಕಲಿಯಲು ಮುಂದಾದ ಪ್ರಮೋದ್, ತೆಲುಗು ಸಿನಿಮಾಗಳನ್ನ ಹೆಚ್ಚಾಗಿ ನೋಡ್ತಿದ್ದಾರಂತೆ. ಈಗಾಗ್ಲೇ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿ ಬಂದಿದ್ದು, ಆ ಅವಿಸ್ಮರಣೀಯ ಅನುಭವಗಳನ್ನು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ ಪ್ರಮೋದ್.

ನಿರ್ದೇಶಕ ನೀಲ್ ಮೊದಲ ದಿನವೇ ಪ್ರಮೋದ್ ನಟನೆಗೆ ಫಿದಾ ಆಗಿಬಿಟ್ಟರಂತೆ. ಪ್ರಭಾಸ್ ಎದುರು ನಿಲ್ಲೋ ಗಟ್ಟಿ ಖಳನಾಯಕನಾಗಿ ಕಾಣಸಿಗಲಿದ್ದು, ಇವ್ರ ಪರ್ಫಾಮೆನ್ಸ್ ಮೆಚ್ಚಿ ಪಾತ್ರವನ್ನು ಮತ್ತಷ್ಟು ವಿಸ್ತಾರಗೊಳಿಸಿದ್ರಂತೆ ನೀಲ್. ಒಟ್ಟಾರೆ ಪ್ರಮೋದ್ ಪ್ರಭಾಸ್ ಜೊತೆ ನಟಿಸ್ತಾರೆ ಅನ್ನೋದಕ್ಕಿಂತ ಪ್ರಭಾಸ್ ಅವ್ರೇ ನಮ್ಮ ಪ್ರಮೋದ್ ಜೊತೆ ನಟಿಸ್ತಿದ್ದಾರೆ ಅನ್ನೋದು ಸಮಂಜಸ ಅನಿಸ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES