Friday, November 22, 2024

ಅಮೆರಿಕಾ ‘ಬಿಲ್​ಬೋರ್ಡ್​’ನಲ್ಲಿ ಆಸ್ಕರ್ ‘ನಾಟು ನಾಟು’

ರಾಜಮೌಳಿಯ ಸಿನಿಮಾಗಳು ಬರೀ ನೋಡುಗರನ್ನಷ್ಟೇ ಅಲ್ಲ, ಅವಾರ್ಡ್​ಗಳನ್ನ ಸಹ ಮಂತ್ರಮುಗ್ಧಗೊಳಿಸುತ್ತವೆ. ತ್ರಿಬಲ್ ಆರ್ ಸಿನಿಮಾ ಮಾಡಿದ ಮೋಡಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಆಸ್ಕರ್ ಪ್ರಶಸ್ತಿ ಪಡೆಯೋ ಹಾದಿಯಲ್ಲಿರೋ ನಾಟು ನಾಟು ಸಾಂಗ್ ಬಗ್ಗೆ ಅಮೆರಿಕಾದ ಮ್ಯಾಗಜಿನ್ ಒಂದು ವರದಿ ಮಾಡಿದೆ. ಆ ಇಂಟರೆಸ್ಟಿಂಗ್ ಸ್ಟೋರಿ ನೀವೊಮ್ಮೆ ಕಣ್ತುಂಬಿಕೊಳ್ಳಿ.

  • 14 ವರ್ಷದ ಜೈಹೋ ನಂತ್ರ ಆಸ್ಕರ್ ಅಂಗಳದಲ್ಲಿ RRR..!
  • ಯುದ್ಧಕ್ಕೂ ಮುನ್ನ ಉಕ್ರೇನ್​ನಲ್ಲಿ ಚಿತ್ರಿಸಲ್ಪಟ್ಟ ಡ್ಯಾನ್ಸ್ ನಂ.
  • ಅಮೆರಿಕನ್ನರ ದಿಲ್ ದೋಚಿದ ಚೆರ್ರಿ & ಟೈಗರ್ ಸ್ಟೆಪ್ಸ್..!

ಭಾರತೀಯ ಚಿತ್ರರಂಗದಲ್ಲಿ ಈ ವರ್ಷದ ಬಿಗ್ಗೆಸ್ಟ್ ಹಿಟ್ ಮೂವೀಸ್ ಯಾವುವು ಅಂದ್ರೆ ಸೌತ್​ನ ಕೆಜಿಎಫ್, ತ್ರಿಬಲ್ ಆರ್ ಹಾಗೂ ಕಾಂತಾರ ಸಿನಿಮಾಗಳ ಹೆಸರುಗಳು ಕೇಳಿಬರುತ್ತವೆ. ಅದ್ರಲ್ಲೂ ರಾಜಮೌಳಿಯ ತ್ರಿಬಲ್ ಆರ್ ನೋಡುಗರಿಗೆ ಬೇರೆಯದ್ದೇ ಅನುಭವ ನೀಡಿದ ಸಿನಿಮಾ. ಕಾರಣ ಪಾತ್ರಗಳು, ಮೇಕಿಂಗ್ ಹಾಗೂ ಚಿತ್ರದ ಬ್ಯಾಕ್​ಡ್ರಾಪ್.

ಬಾಹುಬಲಿ ನಂತ್ರ ಮೌಳಿ ಕರಿಯರ್​ನ ಬಿಗ್ಗೆಸ್ಟ್ ಮಲ್ಟಿಸ್ಟಾರ್ ಮೂವಿ ತ್ರಿಬಲ್ ಆರ್. ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್​ಟಿಆರ್ ಕಾಂಬೋ ಸಿನಿಮಾದಲ್ಲಿ ಬಾಲಿವುಡ್​ನ ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಬಹುದೊಡ್ಡ ತಾರಾಬಳಗವಿತ್ತು. ಈ ಚಿತ್ರ ವಿಶ್ವದ ಮೂಲೆ ಮೂಲೆಯಲ್ಲಿ ನೋಡುಗರಿಗೆ ಮನರಂಜನೆ ನೀಡಿದ್ದಲ್ಲದೆ, ಬಾಕ್ಸ್ ಆಫೀಸ್​ನಲ್ಲಿ 550 ಕೋಟಿ ಬೃಹತ್ ಮೊತ್ತ ಗಳಿಸಿತು.

ಬ್ರಿಟಿಷರ ಕಾಲದ ಸ್ವತಂತ್ರಪೂರ್ವ ಭಾರತವನ್ನು ನೆನಪಿಸೋ ತ್ರಿಬಲ್ ಆರ್​ನಲ್ಲಿ ಎಂ ಎಂ ಕೀರವಾಣಿ ಮ್ಯೂಸಿಕ್ ಕೂಡ ಚಿತ್ರದ ಒನ್ ಆಫ್ ದಿ ಪಿಲ್ಲರ್ ಅಂದ್ರೆ ತಪ್ಪಾಗಲ್ಲ. ಅದ್ರಲ್ಲೂ ನಾಟು ನಾಟು ಡ್ಯಾನ್ಸಿಂಗ್ ನಂಬರ್ ಹುಟ್ಟಿಸಿದ ಕ್ರೇಜ್​, ಸಿನಿಮಾಗೆ ಮತ್ತಷ್ಟು ಮೈಲೇಜ್ ನೀಡಿತ್ತು. ಜೂನಿಯರ್ ಎನ್​ಟಿಆರ್ ಹಾಗೂ ಚರಣ್ ಒಟ್ಟಿಗೆ ಸ್ಟೆಪ್ಸ್ ಹಾಕೋ ಈ ಹಾಡು ಅಕ್ಷರಶಃ ಡ್ಯಾನ್ಸ್ ಬಾರದವ್ರಿಗೂ ಕುಣಿಯುವಂತೆ ಮಾಡಿತ್ತು.

ರಷ್ಯಾ- ಉಕ್ರೇನ್ ಯುದ್ಧಕ್ಕೂ ಮುನ್ನ ಉಕ್ರೇನ್​ನ ಪ್ರೆಸಿಡೆನ್ಷಿಯಲ್ ಪ್ಯಾಲೆಸ್​​ನಲ್ಲಿ ಚಿತ್ರಿಸಲ್ಪಟ್ಟ ಹಾಡು ಇದು. ಚಂದ್ರಬೋಸ್ ಸಾಹಿತ್ಯ ರಚಿಸಿದ್ದ ಈ ಹಾಡಿಗೆ ರಾಹುಲ್ ಹಾಗೂ ಕಾಲಭೈರವ ಗಾಯನವಿದೆ. ಇದು ತೆಲುಗು ಸೇರಿದಂತೆ ಭಾರತದ ಸುಮಾರು ಐದು ಭಾಷೆಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಆದ್ರೆ ಮೂಲ ತೆಲುಗು ಸಾಂಗ್ ಎಲ್ಲರ ಹೃದಯಕ್ಕೆ ನಾಟಿತ್ತು.

ಆಸ್ಕರ್​ಗೆ ತ್ರಿಬಲ್ ಆರ್ ನಾಮಾಂಕಿತವಾಗಿದ್ದು ಕೂಡ ಇದೇ ನಾಟು ನಾಟು ಸಾಂಗ್​ನಿಂದ ಅನ್ನೋದು ಇಂಟರೆಸ್ಟಿಂಗ್. ಹೌದು.. ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಜೈಹೋ ಹಾಡು ಆಸ್ಕರ್ ಪಡೆದಿತ್ತು. ಅದಾದ ಬಳಿಕ ಇಂಡಿಯಾದಿಂದ ಬರೋಬ್ಬರಿ 14 ವರ್ಷಗಳ ನಂತ್ರ ತ್ರಿಬಲ್ ಆರ್ ಸಾಂಗ್ ನಾಮಿನೇಟ್ ಆಗಿದೆ. ಈ ಕುರಿತು ಅಮೆರಿಕಾದ ಬಿಲ್​ಬೋರ್ಡ್​ ಅನ್ನೋ ಮ್ಯೂಸಿಕ್ ಮ್ಯಾಗಜಿನ್ ವರದಿ ಕೂಡ ಮಾಡಿದೆ.

ಆಸ್ಕರ್ ಗೆಲ್ಲುವ ಲಕ್ಷಣಗಳನ್ನು ತೋರಿರುವ ನಾಟು ನಾಟು ಸಾಂಗ್, ರಾಜಮೌಳಿ, ಕೀರವಾಣಿ ಜೊತೆ ಜೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್ ಸ್ಟಾರ್​ಡಮ್ ಕೂಡ ಹೆಚ್ಚಿಸಲಿದೆ. ಇದು ನಿಜಕ್ಕೂ ಪ್ರತಿಯೊಬ್ಬ ಭಾರತೀಯ ಖುಷಿ ಪಡುವ ವಿಚಾರವಾಗಿದ್ದು, ನಮ್ಮ ಸೌತ್ ಕಂಟೆಂಟ್ ಹೀಗೆ ವಿಶ್ವದಾದ್ಯಂತ ಸದ್ದು ಮಾಡ್ತಿರೋದು ಹೆಮ್ಮೆ ಅನಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES