Monday, December 23, 2024

ಕಾಂತಾರ ಕ್ರಾಂತಿ.. ಫ್ರಂಟ್​ಲೈನ್ ಮ್ಯಾಗಜಿನ್​ನಲ್ಲಿ ದಾಖಲೆ

ಇಡೀ ಭಾರತೀಯ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರೋ ಏಕೈಕ ಸಿನಿಮಾ ಅಂದ್ರೆ ಕಾಂತಾರ. ಪ್ರತೀ ದಿನ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದೆ ಶೆಟ್ರ ಈ ಮಾಸ್ಟರ್​ಪೀಸ್. ಚಿತ್ರರಂಗದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿರೋ ಕಾಂತಾರ, ಫ್ರಂಟ್​ಲೈನ್ ಮ್ಯಾಗಜಿನ್​ನಲ್ಲಿ ನೂತನ ದಾಖಲೆ ಬರೆದಿದೆ. ಅದೇನು..? ಯಾಕೆ ಅನ್ನೋದಕ್ಕೆ ಈ ಸ್ಟೋರಿ ಓದಿ.

  • ಖ್ಯಾತ ಪೊಲಿಟಿಕಲ್ ಪಾಕ್ಷಿಕ ಪತ್ರಿಕೆಯಲ್ಲಿ ಕಾಂತಾರ ಕಹಳೆ..!
  • ಮೊದಲ ಬಾರಿ ಸಿನಿಮಾ ನ್ಯೂಸ್.. ಇದು ಕನ್ನಡಿಗರ ಹೆಮ್ಮೆ
  • ಯಶಸ್ವೀ 50 ದಿನಕ್ಕೆ 50 ಡಿವೈನ್ ಡೇಸ್ ಎಂದ ಹೊಂಬಾಳೆ

ವರನಟ ಡಾ. ರಾಜ್​ಕುಮಾರ್ ಕಾಲದಲ್ಲಿ ಕನ್ನಡ ಚಿತ್ರರಂಗ ಬಹಳ ಸಮೃದ್ದವಾಗಿ ಬೆಳೆಯಿತು ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಅದಕ್ಕೆ ಶಂಕರ್​ನಾಗ್, ಅನಂತ್​ನಾಗ್, ವಿಷ್ಣುವರ್ಧನ್, ಅಂಬರೀಶ್​ರಂತಹ ಸಾಕಷ್ಟು ಮಂದಿಯ ಸಾಥ್ ಕೂಡ ಇತ್ತು. ಆದ್ರೀಗ ವೈಭವೀಕರಣದಿಂದ ಮಾತ್ರ ಸಿನಿಮಾ ಹೆಚ್ಚಿನ ಮಂದಿಯ ಮನ ಗೆಲ್ಲೋ ಪರಿಸ್ಥಿತಿ. ನೋಡುಗರ ಮನಸ್ಥಿತಿಗೆ ಅನುಗುಣವಾಗಿ ಸಿನಿಮಾ ತಯಾರಿಸೋ ದಿನಗಳು ಬಂದಿವೆ.

ಇಂತಹ ಸಂದಿಗ್ಧ ದಿನಗಳಲ್ಲಿ ಮೇಕಿಂಗ್ ಜೊತೆ ಕಂಟೆಂಟ್​ನ ಪ್ರಸ್ತುತ ಪಡಿಸೋದು, ಅದನ್ನ ಸ್ಫರ್ಧೆಗೆ ಒಡ್ಡಿ, ಪರಭಾಷಿಗರ ಜೊತೆ ಗುದ್ದಾಡಿ ಗೆಲ್ಲೋದು ಸಾಮಾನ್ಯದ ಮಾತಲ್ಲ. ಬಾಲಿವುಡ್, ಹಾಲಿವುಡ್ ಶೈಲಿಯ ಮೇಕಿಂಗ್​ನಿಂದ ಕೆಜಿಎಫ್ ಎಲ್ಲರ ಹುಬ್ಬೇರಿಸಿತು. ಇದೀಗ ಕಾಂತಾರದ ಕಹಳೆ ಎಲ್ಲೆಲ್ಲೂ ಮೂಡುವಂತಾಗಿದೆ.

ಕರಾವಳಿ ಮಣ್ಣಿನ ಸೊಗಡನ್ನು ವಿಶ್ವಕ್ಕೆ ಮುಟ್ಟಿಸೋ ಕಾರ್ಯ ಮಾಡೋದ್ರಲ್ಲಿ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿ ಯಶಸ್ವಿ ಆಗಿದ್ದಾರೆ. ಕೋಲ, ಪಂಜುರ್ಲಿ, ದೈವಾರಾಧನೆ, ಕಂಬಳ, ಪ್ರಕೃತಿ ಹೀಗೆ ಇವುಗಳನ್ನೇ ಪ್ರಧಾನವಾಗಿಟ್ಟುಕೊಂಡು ಶೆಟ್ರು ಕಥೆ ಹೆಣೆದು, ನೋಡುಗರ ದಿಲ್ ದೋಚಿದ್ದಾರೆ. ಕನ್ನಡದಲ್ಲಿ ಮಾತ್ರ ತಯಾರಾದ ಕಾಂತಾರ, ಪಕ್ಕದ ತೆಲುಗು, ತಮಿಳು, ಮಲಯಾಳಂ, ಅಷ್ಟೇ ಯಾಕೆ ಹಿಂದಿಗೂ ಸಹ ಬೇಡಿಕೆಯ ಆಧಾರದ ಮೇಲೆ ಡಬ್ ಆಯ್ತು.

ದೇಶ ವಿದೇಶಗಳಲ್ಲಿ ಕಾಂತಾರದ ಗಮ್ಮತ್ತಿಗೆ ಬಾಕ್ಸ್ ಆಫೀಸ್ ತುಂಬಿ ತುಳುಕುತ್ತಿದೆ. ಸದ್ಯ ಯಶಸ್ವಿ 50ನೇ ದಿನ ಪೂರೈಸಿರೋ ಕಾಂತಾರ, ಬರೋಬ್ಬರಿ 300ಕ್ಕೂ ಅಧಿಕ ಸೆಂಟರ್​ಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ. ಪಾತ್ರಗಳಲ್ಲಿ ಗಟ್ಟಿತನ, ಕಥೆಯಲ್ಲಿ ಸತ್ವವಿದ್ರೆ ಎಂತಹ ಸಿನಿಮಾ ಕೂಡ ಗೆಲ್ಲುತ್ತೆ ಅನ್ನೋದಕ್ಕೆ ಕಾಂತಾರ ಪ್ರತ್ಯಕ್ಷ ಸಾಕ್ಷಿ ಆಗಿದೆ. 400 ಕೋಟಿಗೆ ದೊಡ್ಡ ಮೊತ್ತದ ಗಳಿಕೆಯಿಂದ ದಾಖಲೆ ಬರೆದಿದೆ. ಇದೆಲ್ಲವೂ ಗೊತ್ತಿರೋ ವಿಷ್ಯವೇ ಆದ್ರೂ, ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ಪತ್ತೊಂದು ರೆಕಾರ್ಡ್​ ಮಾಡಿದೆ ಕಾಂತಾರ.

ಯೆಸ್.. ಫೇಮಸ್ ಪೊಲಿಟಿಕಲ್ ಮ್ಯಾಗಜಿನ್ ಫ್ರಂಟ್​ಲೈನ್​ನಲ್ಲಿ ಕಾಂತಾರದ ಸುದ್ದಿ ಬಿತ್ತರವಾಗಿದೆ. ಇದು ಇತಿಹಾಸದಲ್ಲಿ ಸಿನಿಮಾ ಸುದ್ದಿಯೊಂದು ಫ್ರಂಟ್​ಲೈನ್​ ಮ್ಯಾಗಜಿನ್​ನಲ್ಲಿ ಸುದ್ದಿಯಾಗ್ತಿರೋದು ಇದೇ ಮೊದಲಂತೆ. ಚೆನ್ನೈ ಮೂಲದ ಹಿಂದೂ ಗ್ರೂಪ್​ನ ಪಾಕ್ಷಿಕ ಪತ್ರಿಕೆ ಫ್ರಂಟ್​ಲೈನ್​, ಕಾಂತಾರ ಚಿತ್ರದ ಗತ್ತು, ಗಮ್ಮತ್ತನ್ನ ಪ್ರಕಟಿಸಿದೆ ಅಂದ್ರೆ ಸಿನಿಮಾದ ತೀವ್ರತೆ ಎಷ್ಟಿರಬೇಡ ಅಂತ ನೀವೇ ಒಮ್ಮೆ ಊಹಿಸಿ.

ಅದೇನೇ ಇರಲಿ, ಕನ್ನಡಿಗರ ಫಿಲ್ಮ್ ಮೇಕಿಂಗ್ ತಾಕತ್ತು ವಿಶ್ವ ಸಿನಿದುನಿಯಾದಲ್ಲಿ ಮನೆ ಮಾತಾಗುವಂತಾಗಿದೆ. ಆ ನಿಟ್ಟಿನಲ್ಲಿ ಯಶ್, ಪ್ರಶಾಂತ್ ನೀಲ್, ಹೊಂಬಾಳೆ ಫಿಲಂಸ್ ಸಾಲಿಗೆ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿರೋದು ಖುಷಿಯ ವಿಚಾರ. ಈ ವಿಜಯಯಾತ್ರೆಯನ್ನ ಕನ್ನಡ ಇಂಡಸ್ಟ್ರಿ ಹೀಗೆಯೇ ಮುಂದುವರೆಸಬೇಕು ಅನ್ನೋದು ಎಲ್ಲರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES