ನಟನೆಯ ಹೊರತಾಗಿಯೂ ಬಹುಭಾಷಾ ನಟ ಪ್ರಕಾಶ್ ರೈ ಅದ್ಭುತ ಪ್ರತಿಭಾವಂತ. ಇವ್ರ ನೇರನುಡಿ ಒಮ್ಮೊಮ್ಮೆ ಇವ್ರ ಕರಿಯರ್ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದೂ ಇದೆ. ರಾಜಕೀಯವಾಗಿ ಬೆಳೆಯದೇ ಇರೋದಕ್ಕೂ ಇವ್ರ ಸಿದ್ಧಾಂತ ಹಾಗೂ ನಿಲುವುಗಳೇ ಕಾರಣ ಎನ್ನಲಾಗುತ್ತೆ. ಆದ್ರೀಗ ಇವ್ರಿಗೆ ಬಿದ್ದಿರೋ ಆ ಒಂದು ಮುದ್ರೆಯಿಂದ ಒಂದಷ್ಟು ಮಂದಿ ಇವ್ರೊಟ್ಟಿಗೆ ನಟಿಸೋಕೆ ನಿರಾಕರಿಸ್ತಿದ್ದಾರಂತೆ.
- #JustAsking ಹೆಸ್ರಲ್ಲಿ ಸರ್ಕಾರವನ್ನು ಟೀಕಿಸ್ತಿದ್ದ ಪ್ರಕಾಶ್ ರೈ
- ವೃತ್ತಿ ಜೀವನಕ್ಕೆ ಕುತ್ತು.. ಇವ್ರೊಟ್ಟಿಗೆ ನಟಿಸೋಕೆ ಭಯವಂತೆ
- ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ನಿಂದ ಸ್ಫೋಟಕ ಹೇಳಿಕೆ..!
ಯೆಸ್.. ರಂಗಭೂಮಿಯಿಂದ ಬಂದಂತಹ ಕರಾವಳಿ ಮೂಲದ ಪ್ರಕಾಶ್ ರೈ, ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಗಳಲ್ಲಿ ಬಹುದೊಡ್ಡ ಛಾಪು ಮೂಡಿಸಿದ್ದಾರೆ. ನೀರು ಕುಡಿದಷ್ಟೇ ಲೀಲಾಜಾಲವಾಗಿ ನಟಿಸೋ ಈ ಪ್ರತಿಭಾವಂತ ಕಲಾವಿದ ಅಂದ್ರೆ, ಎಲ್ಲಾ ಸೂಪರ್ ಸ್ಟಾರ್ಗಳಿಗೂ ಅಚ್ಚುಮೆಚ್ಚು.
ನಟನೆ ಜೊತೆ ಸಾಕಷ್ಟು ಸಾಮಾಜಿಕ ಕಾರ್ಯಗಳಿಂದಲೂ ಗುರ್ತಿಸಿಕೊಂಡಿರೋ ರೈ, ನೇರ ನುಡಿಯಿಂದ ನಿಷ್ಟುರತೆಗೆ ಒಳಗಾಗಿದ್ದೂ ಇದೆ. ಅದ್ರಲ್ಲೂ ಎಡಪಂಥೀಯ ಧೋರಣೆಗಳಿಂದ ಗುರ್ತಿಸಿಕೊಂಡಿರೋ ಇವ್ರು, ಬಿಜೆಪಿ ಹಾಗೂ ಹಿಂದುತ್ವವನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬರ್ತಿದ್ದಾರೆ. ಹ್ಯಾಶ್ಟ್ಯಾಗ್ ಜಸ್ಟ್ ಆಸ್ಕಿಂಗ್ ಮೂಲಕ ಮೋದಿಗೆ ಹತ್ತಾರು ಪ್ರಶ್ನೆಗಳನ್ನ ಕೇಳಿದ ರೈ, ಇಂಡಿಯಾ ಬರೀ ಹಿಂದೂ ರಾಷ್ಟ್ರವಲ್ಲ ಎಂದಿದ್ರು.
ಪ್ರಕಾಶ್ ರೈರ ನಿಲುವುಗಳು ಹಾಗೂ ಸಿದ್ಧಾಂತಗಳು ಬಲಪಂಥೀಯರನ್ನ ಕೆರಳಿಸುವಂತಿದ್ದು, ಶೇಕಡಾವಾರು ಹೆಚ್ಚಿರೋ ಬಲಪಂಥೀಯರಿಂದ ಇವ್ರ ಕರಿಯರ್ಗೆ ಹೊಡೆತ ಬೀಳುವಂತಾಗಿದೆ. ಇವ್ರ ರಾಜಕೀಯ ನಿಲುವುಗಳು ಕರಿಯರ್ಗೆ ಕುತ್ತು ತರ್ತಿವೆ. ಅಷ್ಟೇ ಅಲ್ಲ, ಇವ್ರ ರಾಜಕೀಯ ಹಿನ್ನಡೆಗೂ ಅದೇ ನೇರ ಕಾರಣವಾಗಿದೆ.
ಸದ್ಯ ಒಂದಷ್ಟು ಕಲಾವಿದರು ಇವರೊಟ್ಟಿಗೆ ನಟಿಸೋಕೆ ಭಯ ಪಡ್ತಿದ್ದಾರಂತೆ. ಅದನ್ನ ಸ್ವತಃ ರೈ ಅವ್ರೇ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ರೈ ಜೊತೆ ನಟಿಸೋಕೆ ಕಲಾವಿದರಿಗೆ ಭಯ
‘ನನ್ನ ರಾಜಕೀಯ ನಿಲುವುಗಳು ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಕೆಲವರು ನನ್ನೊಂದಿಗೆ ಕೆಲಸ ಮಾಡುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಿದ್ರೆ ‘ಅವ್ರು’ ಒಪ್ಪುವುದಿಲ್ಲ ಅನ್ನೋ ಭಯ ಅವ್ರಿಗೆ ಶುರುವಾಗಿದೆ. ಆದ್ರೆ ನಾನು ಇದೆಲ್ಲವನ್ನು ತಡೆದುಕೊಳ್ಳೋ ಅಷ್ಟು ಬಲಶಾಲಿ ಹಾಗೂ ಶ್ರೀಮಂತ. ನನ್ನ ಭಯ ಯಾರೋ ಒಬ್ರ ಶಕ್ತಿ ಆಗಿದೆ ಅಂತ ನಾನು ಯಾವಾಗ್ಲೂ ಭಾವಿಸುತ್ತೇನೆ.’
- ಪ್ರಕಾಶ್ ರೈ, ಬಹುಭಾಷಾ ನಟ
ಒಟ್ಟಾರೆ ಗೌರಿ ಲಂಕೇಶ್ ಹತ್ಯೆ ಬಳಿಕ ಜಸ್ಟ್ ಆಸ್ಕಿಂಗ್ನಿಂದ ಬಿಜೆಪಿಯ ಶತ್ರುವಂತೆ ಗುರ್ತಿಸಿಕೊಂಡಿರೋ ರೈ, ಎಂತಹ ಒಳ್ಳೆಯ ಪಾತ್ರಗಳು ಮಾಡಿದ್ರೂ, ಹತ್ತಾರು ಒಳ್ಳೆಯ ಸಾಮಾಜಿಕ ಕಾರ್ಯಗಳು ಮಾಡಿದ್ರೂ ತಕ್ಕ ಶ್ರೇಯಸ್ಸು ಮಾತ್ರ ಸಿಗ್ತಿಲ್ಲ. ಸದ್ಯ ಅಪ್ಪು ಹೆಸರಲ್ಲಿ ಪ್ರತಿ ಜಿಲ್ಲೆಗೂ ಆ್ಯಂಬುಲೆನ್ಸ್ ನೀಡೋ ಇವ್ರ ಮಹತ್ವದ ಕಾರ್ಯ ನಡೀತಿದೆ. ಪ್ರಕಾಶ್ ರಾಜ್ ಫೌಂಡೇಶನ್ನಂತೆ ಮತ್ತಷ್ಟು ಕಾರ್ಯಗಳು ಆಗ್ಬೇಕು ಅಂದ್ರೆ ಅವ್ರ ಕರಿಯರ್ ಚೆನ್ನಾಗಿರಬೇಕು. ಇದನ್ನ ಇಂಡಸ್ಟ್ರಿ ಅರಿತರೆ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ