ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಇನ್ನೂ 2 ದಿನ ಇದೇ ಸ್ಥಿತಿ ಮುಂದುವರಿಯಲಿದ್ದು, ಚಳಿಯ ವಾತಾವರಣದಿಂದ ಕೂಡಿರಲಿದೆ.
ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವುದರಿಂದ 3 ದಿನಗಳ ಕಾಲ ಹಲವೆಡೆ ಮೋಡ ಕವಿದ ವಾತಾವರಣ ಜೊತೆಗೆ ಅಧಿಕ ಮಳೆಯಾಗುತ್ತಿದೆ. ಜೊತೆಗೆ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ 2 ದಿನಗಳ ಕಾಲ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಇಂದು ದಕ್ಷಿಣ ಒಳನಾಡಿನ ಕೊಡಗು, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.