ಬೆಂಗಳೂರು : ಶಾಲಾ ಕೊಠಡಿಗಳಿಗೆ ಕೇಸರಿಬಣ್ಣ ಹೊಡೆಯುವ ಸರ್ಕಾರದ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಕೇಸರಿ ಬಣ್ಣ ಕಂಡರೆ ಯಾಕೆ ಅಲರ್ಜಿ ಎಂದು ಕಿಡಿಕಾರಿದ್ದಾರೆ.
ವಿವೇಕ ಯೋಜನೆಯಡಿನಿರ್ಮಾಣವಾಗುತ್ತಿರುವ ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ ಹೊಡೆಯಲು ಸರ್ಕಾರ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆಗಳು ವಿರೋಧ ಮಾಡಿವೆ. ವಿರೋಧ ಮಾಡಿದ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆ ವಿರುದ್ಧ ಮುಖ್ಯಮಂತ್ರಿಗಳು ಕಿಡಿಕಾರಿದರು. ಎಲ್ಲದರಲ್ಲೂ ರಾಜಕಾರಣ ಮಾಡುವುದು ಇಂದು ಬಹಳ ಕೆಳಹಂತಕ್ಕೆ ಹೋಗುತ್ತಿದೆ.
ಕೇಸರಿ ಬಣ್ಣ ನಮ್ಮ ಭಾರತದ ಬಾವುಟದಲ್ಲೇ ಇದೆ. ಕೇಸರಿ ಕಂಡರೆ ಅವರಿಗೆ ಯಾಕೆ ಅಷ್ಟೊಂದು ಅಲರ್ಜಿ? ಎಂದು ಪ್ರಶ್ನೆ ಮಾಡಿದರು. ಈ ಯೋಜನೆಯನ್ನು ಸ್ವಾಮಿ ವಿವೇಕಾನಂದ ಅವರ ಹೆಸರಿನಲ್ಲಿ ಮಾಡುತ್ತಿದ್ದೇವೆ. ಸ್ವಾಮಿ ವಿವೇಕಾನಂದ ಒಬ್ಬ ಸನ್ಯಾಸಿ. ಅವರು ತೊಡುತ್ತಿದ್ದ ಎಲ್ಲಾ ವಸ್ತ್ರಗಳೂ ಕೇಸರಿ. ಹೀಗಾಗಿ ಅವರ ಹೆಸರಿನಲ್ಲಿ ಮಾಡುತ್ತಿರುವ ಯೋಜನೆಯಾದ್ದರಿಂದ ಶಾಲೆಗಳ ಕೊಠಡಿಗೆ ಕೇಸರಿ ಬಣ್ಣ ಹಚ್ಚಲಾಗುತ್ತಿದೆ. ಅದರಲ್ಲಿ ಬೇರೆ ಯಾವುದೇ ಅರ್ಥವಿಲ್ಲ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ. ಇದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೊಮ್ಮಾಯಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.