ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಒಬ್ಬೊಬ್ಬರೇ ಆರೋಪಿಗಳ ಹೆಡೆಮುರಿ ಕಟ್ಟತೊಡಗಿದ್ದಾರೆ. ಪ್ರಕರಣ ನಡೆದು ನಾಲ್ಕು ತಿಂಗಳಾಗುತ್ತಾ ಬಂದರೂ, ಸುಳ್ಯದಲ್ಲಿ ಆಗಿಂದಾಗ್ಗೆ ಕಾರ್ಯಾಚರಣೆ ನಡೆಯುತ್ತಲೇ ಇದೆ. ಸ್ಥಳೀಯ ಪೊಲೀಸರಿಗೂ ತಿಳಿಯದಂತೆ ಎನ್ಐಎ ಅಧಿಕಾರಿಗಳು ನೇರವಾಗಿ ಶಂಕಿತರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದೀಗ ಮತ್ತೊಬ್ಬ ಆರೋಪಿಯನ್ನು ಎನ್ಐಎ ತಂಡ ಸದ್ದಿಲ್ಲದೆ ಬಲೆಗೆ ಕೆಡವಿದೆ.
ಇತ್ತೀಚೆಗಷ್ಟೇ ಎಸ್‌ಡಿಪಿಐ ಪ್ರಭಾವಿ ಮುಖಂಡರಾಗಿದ್ದ ಇಸ್ಮಾಯಿಲ್ ಶಾಫಿ ಬೆಳ್ಳಾರೆ ಮತ್ತು ಆತನ ಸಹೋದರ ಇಕ್ಬಾಲ್ ಬೆಳ್ಳಾರೆ ಬಂಧನ ಆಗಿತ್ತು. ಪ್ರಕರಣದಲ್ಲಿ ಸಂಚು ರೂಪಿಸಿದ್ದ ಇಬ್ಬರು ಸೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಷ್ಟು ವಿಚಾರಗಳು ಬಯಲಿಗೆ ಬಂದಿವೆ. ಇದೀಗ ಇಸ್ಮಾಯಿಲ್ ಶಾಫಿಗೆ ಸಂಬಂಧದಲ್ಲಿ ಮೈದುನ ಆಗಿರುವ ಬೆಳ್ಳಾರೆ ನಿವಾಸಿ ಶಾಹಿದ್‌ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಶಾಹಿದ್ ನೇರವಾಗಿ ಶಾಮೀಲಾಗಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ಬಲೆಗೆ ಕೆಡವಲಾಗಿದೆ.
ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಶಾಹಿದ್ ಬಂಧನ ಆಗುತ್ತಿದ್ದಂತೆ ಒಟ್ಟು ಬಂಧಿತರ ಸಂಖ್ಯೆ 14ಕ್ಕೇರಿದೆ. ಇದಲ್ಲದೆ, ನಾಲ್ವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಎನ್ಐಎ ಮತ್ತು ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಳ್ಳಾರೆ ನಿವಾಸಿ ಮೊಹಮ್ಮದ್ ಮುಸ್ತಫಾ ಮತ್ತು ಮಡಿಕೇರಿ ನಿವಾಸಿ ತುಫೈಲ್ ಎಂ.ಹೆಚ್ ಎಂಬಿಬ್ಬರ ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಸುಳ್ಯ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್ ಮತ್ತು ಬೆಳ್ಳಾರೆಯ ಅಬುಬಕ್ಕರ್ ಸಿದ್ದಿಕ್ ಪತ್ತೆಗೆ ತಲಾ ಎರಡು ಲಕ್ಷ ಬಹುಮಾನ ಘೊಷಿಸಲಾಗಿದೆ. ಇವರ ಪತ್ತೆಗಾಗಿ ಎನ್ಎಐ ತಂಡವು ಸಾರ್ವಜನಿಕರ ಸಹಾಯವನ್ನೂ ಯಾಚಿಸಿದೆ.
ಇದೇ ವೇಳೆ, ಜಾಬೀರ್ ಅರಿಯಡ್ಕ ಎಂಬ ಎಸ್‌ಡಿಪಿಐ ಮುಖಂಡನನ್ನೂ ಎನ್ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಎಲ್ಲಾ ಆರೋಪಿಗಳ ಬೆನ್ನು ಬಿದ್ದಿದ್ದು, ಒಬ್ಬೊಬ್ಬರನ್ನೇ ಬಲೆಗೆ ಕೆಡವಲು ಮುಂದಾಗಿದ್ದಾರೆ.
ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು