ಬೆಂಗಳೂರು : ವರುಣ, ಬಾದಾಮಿ ಈಗ ಕೋಲಾರ. ಕ್ಷೇತ್ರ ಯಾವುದಯ್ಯ ಅಂತಿದ್ದ ಮಂದಿಗೆ ಇದೇ ನೋಡಿ ನನ್ನ ಕ್ಷೇತ್ರ ಅಂತ ತೋರಿಸಿಕೊಟ್ಟಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಹೌದು, 2013 ರಲ್ಲಿ ವರುಣಾ ಕ್ಷೇತ್ರದಿಂದ ಗೆದ್ದು ಸಿಎಂ ಆಗಿದ್ರು. ಈಗ ಆ ಯೋಗ ಕೋಲಾರಮ್ಮ ಕಲ್ಪಿಸುತ್ತಾಳಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಆ ಕಡೆ ವರುಣಾ, ಬದಾಮಿ, ಚಾಮರಾಜನಗರ, ಚಾಮರಾಜಪೇಟೆಯಿಂದಲೂ ಸ್ಪರ್ಧೆ ಮಾಡುವಂತೆ ಒತ್ತಡ ಹಾಕ್ತಿದ್ರು. ಅಂತಿಮವಾಗಿ ಕೋಲಾರ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನೊಂದು ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡು, ಎರಡು ಕಡೆ ಕಣಕ್ಕಿಳಿಯೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ ಎನ್ನಲಾಗ್ತಿದೆ.
ಇನ್ನು ಮೊದಲಿನಿಂದಲೂ ಸಿದ್ದರಾಮಯ್ಯ ವಿರುದ್ಧ ಗರಂ ಆಗಿಕೊಂಡೇ ಬಂದಿದ್ದ ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪನವರು ಸಿದ್ದರಾಮಯ್ಯನವ್ರಿಗೆ ಶಾಕ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸೋ ವಿಚಾರ ತಿಳಿದಿದ್ರೂ, ಗುಜರಾತ್ ನೆಪ ಹೇಳಿ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಕೆ.ಎಚ್ ಮುನಿಯಪ್ಪ ಪುತ್ರಿ ಹಾಗೂ ಶಾಸಕಿ ರೂಪ ಶಶಿಕಲಾ ಕೂಡ ಗೈರಾಗಿದ್ರು. ಬ್ಯಾನರ್, ಬಂಟಿಂಗ್ಸ್‌ಗಳಲ್ಲೂ ಕೆ.ಎಚ್ ಮುನಿಯಪ್ಪನವ್ರ ಫೋಟೋ ಕಾಣಿಸಲಿಲ್ಲ. ಆದ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ & ಕಂಪನಿ ಹವಾ ಮಾತ್ರ ಜೋರಾಗಿತ್ತು.. ಮಾಜಿ ಸಚಿವ ಕೃಷ್ಣಭೈರೇಗೌಡ, ಮಾಲೂರು ಶಾಸಕ ನಂಜೇಗೌಡ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಭೈರತಿ ಸುರೇಶ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯನವ್ರಿಗೆ ಸಾಥ್ ನೀಡಿದ್ರು.
2013ರಲ್ಲಿಅಹಿಂದ ಜಪ ಮಾಡಿಕೊಂಡೇ ಸಿಎಂ ಪಟ್ಟಕ್ಕೇರಿದ್ದ ಸಿದ್ದರಾಮಯ್ಯ, ಕೋಲಾರದಲ್ಲೂ ಅಹಿಂದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳು 28 ಸಾವಿರ ಇದ್ರೂ, ಮುಸ್ಲಿಂ, ಕುರುಬ, ಎಸ್‌ಸಿ ಮತಗಳೇ ಇಲ್ಲಿ ನಿರ್ಣಾಯಕ. ಮುಸ್ಲಿಂ ಮತಗಳು 43 ಸಾವಿರ ಇದ್ರೆ, ಎಸ್ ಸಿ ಸಮುದಾಯದ ಮತಗಳು 42 ಸಾವಿರ ಇದೆ. ಪರಿಶಿಷ್ಡ ಪಂಗಡ 29 ಸಾವಿರ, ಇತರೆ ಸಮುದಾಯದವರು 55 ಸಾವಿರ ಮತದಾರರಿದ್ದಾರೆ.
ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ಕೊಟ್ಟಿರೋದ್ರಿಂದ ಸಿದ್ದರಾಮಯ್ಯ ಮೇಲೆ ಇಲ್ಲಿನ ಜನ ತುಂಬಾ ಪ್ರೀತಿ ಇಟ್ಟಿದ್ದಾರೆ. ಆದ್ರೆ, ಕೆ.ಎಚ್ ಮುನಿಯಪ್ಪನವ್ರ ಭಿನ್ನ ನಡೆಯಿಂದ ದಲಿತ ಮತಗಳು ಹಂಚಿಹೋಗೋ ಸಾಧ್ಯತೆ ಇದೆ. ಇದ್ರ ಜೊತೆಗೆ ಬಿಜೆಪಿಯಿಂದ ವರ್ತೂರು ಪ್ರಕಾಶ್ ಏನಾದ್ರೂ ಕಣಕ್ಕಿಳಿದ್ರೆ, ಕುರುಬ ಸಮುದಾಯದ ಮತಗಳೂ ಕೈ ಹಿಡಿಯದೇ ಇರಬಹುದು.. ಸದ್ಯ ಟಿಪ್ಪು ಜಪ ಮಾಡ್ತಿರೋ ಸಿದ್ದರಾಮಯ್ಯನವ್ರಿಗೆ ಇಲ್ಲಿನ ಮುಸ್ಲಿಂ ಮತದಾರರೇ ಅಳಿವು ಉಳಿವನ್ನ ನಿರ್ಧಾರ ಮಾಡ್ತಾರೆ.
ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಎನ್ನುತ್ತಿದ್ದಂತೆ ಬಿಜೆಪಿ ಫುಲ್ ಅಲರ್ಟ್ ಆಗಿದೆ.
ಚುನಾವಣೆ ಗಿಮಿಕ್‌ಗಾಗಿ ಕೋಲಾರದಿಂದ ಯಾತ್ರೆ ಮಾಡ್ತಿದ್ದಾರೆ. ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡ್ತಿದ್ದಾರೆ. ಯಾವ ಕಾರಣಕ್ಕೂ ಅವರನ್ನ ಕ್ಷಮಿಸಲ್ಲ ಅಂತ ಟಗರು ಮೇಲೆ ಮುಗಿ ಬಿದ್ದಿದ್ದಾರೆ.
ಒಟ್ನಲ್ಲಿ ಸಿದ್ದರಾಮಯ್ಯನವ್ರ ಅಬ್ಬರದ ಪ್ರಚಾರಕ್ಕೆ ಬಿಜೆಪಿ ನಾಯಕರೇ ಕಂಗಾಲಾದಂತೆ ಕಾಣ್ತಿದೆ. ಕೋಲಾರದಲ್ಲಿ ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿ ವರ್ತೂರು ಪ್ರಕಾಶ್ ಅವ್ರನ್ನ ಕಣಕ್ಕಿಳಿಸುವ ಬಿಜೆಪಿ ತಾಲೀಮು ನಡೆಸ್ತಿದೆ. ಈ ನಡುವೆ ಆತಂಕರಿಕ ಶತ್ರುಗಳ ಕಾಟ ಸಿದ್ದರಾಮಯ್ಯನವ್ರಿಗೆ ನಿದ್ದೆಗೆಡಿಸಿರೋದಂತೂ ಸುಳ್ಳಲ್ಲ.
ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ