ನವದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೋರೇಷನ್ ಆಫ್ ದೆಹಲಿ (ಎಂಸಿಡಿ) ಚುನಾವಣೆಯಲ್ಲಿ ಎಎಪಿ(ಆಮ್ ಆದ್ಮಿ ಪಾರ್ಟಿ) ಪಕ್ಷದಿಂದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಪಕ್ಷದ ಹಲವು ಕಾರ್ಯಕರ್ತರು ಇದೀಗ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅದರಂತೆ ಮಾಜಿ ನಾಮನಿರ್ದೇಶಿತ ಕೌನ್ಸಿಲರ್ ಹಸೀಬ್ ಉಲ್ ಹಸನ್ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕೋಪಗೊಂಡು ವಿದ್ಯುತ್ ಪ್ರಸರಣ ಟವರ್ ಮೇಲೆ ಏರಿ ಕುಳಿತು ಟಿಕೆಟ್ ಘೋಷಣೆ ಮಾಡುವಂತೆ ಪಟ್ಟು ಹಿಡಿದ ಘಟನೆ ಇಂದು ದೆಹಲಿಯಲ್ಲಿ ನಡೆದಿದೆ.
ಈ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಎಎಪಿ ನಾಯಕರಿಂದ ತನಗೆ ವಂಚನೆಯಾಗಿದೆ ಎಂದು ಹಸೀಬ್ ಉಲ್ ಹಸನ್ ಟವರ್ ಮೇಲೆ ಕುಳಿತುಕೊಂಡು ಆರೋಪಿಸಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾನೆ. ನಂತರ ಟವರ್ ಏರಿ ಕುಳಿತ ಆಮ್ ಆದ್ಮಿ ಪಕ್ಷದ ಮುಖಂಡನನ್ನ ದೆಹಲಿ ಪೊಲೀಸರು ಹರಸಾಹಸ ಪಟ್ಟಿದ್ದು, ಕೊನೆಗೂ ಆಪ್ ಮುಖಂಡನನ್ನ ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಮ್ ಆದ್ಮಿ ಪಕ್ಷವು (ಎಎಪಿ) 250 ವಾರ್ಡ್ಗೆ ದೆಹಲಿಯ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಗೆ ತನ್ನ 117 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಡಿಸೆಂಬರ್ 4 ಕ್ಕೆ ಚುನಾವಣೆ ನಡೆಯಲಿದೆ.