ಬೆಂಗಳೂರು : ಕಳೆದ ಒಂದು ವರ್ಷದಿಂದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದಿತ ಕೇಂದ್ರಬಿಂದುವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಆಚರಣೆ ಬೆನ್ನಲ್ಲೇ ರಾಜ್ಯೋತ್ಸವಕ್ಕೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಬಿಗಿಪಟ್ಟು ಹಿಡಿದಿದೆ. ರಾಜ್ಯದೆಲ್ಲೆಡೆ ನವೆಂಬರ್ ಒಂದನೇ ತಾರೀಕಿನಂದು ಕನ್ನಡ ಬಾವುಟ ಹಾರಾಡಿತ್ತು. ಆದ್ರೆ, ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆ ಆಗದೇ ಇರೋದು ಒಕ್ಕೂಟದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಅನುಮತಿ ನೀಡುವ ವಿಚಾರದಲ್ಲಿ ನವೆಂಬರ್ 15ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಲಾಗಿದೆ. ಆದ್ರೆ, ಸರ್ಕಾರ ಈವರೆಗೆ ಮೌನವಾಗಿರೋದು ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಬುಧವಾರಕ್ಕೆ ಮುಗಿಯಲಿದೆ. ಡೆಡ್ ಲೈನ್ ಮುಗಿದ್ರೂ ಅನುಮತಿ ನೀಡದಿದ್ರೆ ಸಿಎಂ ಮನೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಪ್ಪು ಹಾಗೂ ಪ್ರಧಾನಿ ಮೋದಿ ಕಾರ್ಯಕ್ರಮಗಳ ಹಿನ್ನೆಲೆ, ನ.11ರ ಬಳಿಕ ಮೈದಾನದಲ್ಲಿ ಕನ್ನಡ ಬಾವುಟ ಹಾರಿಸುವ ಕುರಿತು ಚರ್ಚೆ ನಡೆಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ರು. ಆದರೆ ವಿನಾಃ ಕಾಲಹರಣ ಮಾಡ್ತಾ ಬಂದಿದ್ರು, ಮತ್ತೆ ಮುಂದೆ ಯಾವುದೇ ಗಡುವು ಕೊಡೊಲ್ಲ. ಬುಧವಾರ ಸಂಜೆ ಒಕ್ಕೂಟದ ಸದಸ್ಯರೊಂದಿಗೆ ಸಭೆ ನಡೆಸಿ, ಹೋರಾಟ ತೀರ್ಮಾನ ಕೈಗೊಳ್ಳುತ್ತೇವೆ. ನ.15ರೊಳಗೆ ಅಂತಿಮ ನಿರ್ಧಾರ ಪ್ರಕಟಿಸದಿದ್ರೆ ಸಿಎಂ ಮನೆ ಮುಂದೆ ಧರಣಿ ನಿಶ್ಚಿತ ಅಂತ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಕಿಡಿ ಕಾರುತ್ತಿದ್ದಾರೆ.
ಇನ್ನೂ ಈ ಒಕ್ಕೂಟದ ಹೋರಾಟಕ್ಕೆ ಕನ್ನಡ ಪರ ಹಾಗೂ ಹಿಂದೂ ಸಂಘಟನೆಗಳು ಸಾಥ್ ನೀಡಲಿವೆ. ಸೈಲೆಂಟ್ ಆಗಿರುವ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರ ಇಲ್ಲಿ ಯಾಕೆ ಆಗ್ತಿಲ್ಲ? ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅಂತ ಹೆಸರಿಡಲಾಗಿದೆ. ಕನಕ ಜಯಂತ್ಯೋತ್ಸವ ಆಚರಣೆ ಆಯ್ತು, ಟಿಪ್ಪು ಜಯಂತಿಗೂ ಅನುಮತಿ ಇದೆ. ಹೀಗಿರುವಾಗ ಈದ್ಗಾ ಮೈದಾನ ವಿಚಾರವಾಗಿ ಯಾಕಿಷ್ಟು ಮೌನ ಅಂತಾ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಪ್ರಶ್ನೆ ಮಾಡ್ತಿವೆ.
ಒಟ್ಟಾರೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟ ತಿಪ್ಪರಲಾಗ ಹಾಕಿದ್ರೂ ಸರ್ಕಾರ ಮಣೆ ಹಾಕ್ತಿಲ್ಲ. ಹೋರಾಟದ ಮೂಲಕವಾದ್ರೂ ಸರ್ಕಾರ ಗಮನ ಸೆಳೆಯಲು ಪ್ರತಿಭಟನೆ, ಧರಣಿಗೆ ಮುಂದಾಗ್ತಿದ್ದಾರೆ. ಇವರ ಈ ಹೋರಾಟಕ್ಕೆ ಸರ್ಕಾರಕ್ಕೆ ಮಣಿದು ಅನುಮತಿ ನೀಡುತ್ತಾ..? ಕಾದು ನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.