ಬೆಳಗಾವಿ : ಗೇಟ್ ಬಂದ್ ಮಾಡಿ ನಿಂತಿರುವ ಭದ್ರತಾ ಸಿಬ್ಬಂದಿ ಜೊತೆ ಸಾರ್ವಜನಿಕರ ವಾಗ್ವಾದ. ಮೃತದೇಹವನ್ನು ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸುತ್ತಿರುವ ಆಸ್ಪತ್ರೆ ಸಿಬ್ಬಂದಿ. ಶವಾಗಾರ ಎದುರು ಕಣ್ಣೀರಿಡುತ್ತಿರುವ ಕುಟುಂಬಸ್ಥರು.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ. ಇಲ್ಲಿ ಓರ್ವ ವ್ಯಕ್ತಿ ಪೊಲೀಸರ ವಶದಲ್ಲಿದ್ದಾಗ ನಿಗೂಢವಾಗಿ ಸಾವನಪ್ಪಿದ್ದಾನೆ. ಬಸನಗೌಡ ಪಾಟೀಲ್ ಎಂಬಾತ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಸಿಬ್ಬಂದಿ ಹಳೆಯ NDPS ಪ್ರಕರಣ ಸಂಬಂಧ ವಿಚಾರಣೆಗಾಗಿ ಕರೆದುಕೊಂಡು ಬಂದಿದ್ರು. ಆದರೆ, ಸಡನ್ ಆಗಿ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿಯಾಗಲು ಆರಂಭಿಸಿದ್ದು, ದೇಹ ಬೆವರಲು ಶುರುವಾಗಿದೆ. ತಕ್ಷಣ ಪೊಲೀಸರು ಮಾರ್ಗಮಧ್ಯೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಬಳಿಕ ಆರೋಪಿಯನ್ನು ಸ್ಟೇಷನ್ಗೆ ಕರೆದುಕೊಂಡು ಬರಲಾಯಿತು. ಆದರೂ ಆತನ ಆರೋಗ್ಯ ಸುಧಾರಿಸಿಲ್ಲ. ಬೆಳಗಾವಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಬಸನಗೌಡ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ.
ಮನೆಯವರಿಗೆ ಕರೆ ಮಾಡಿದ ಪೊಲೀಸರು. ತಕ್ಷಣ ವಿಮ್ಸ್ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾರೆ. ಬಸನಗೌಡನ ಸಾವಿನ ವಿಷಯ ತಿಳಿದು ಕುಟುಂಬಸ್ಥರು ಶಾಕ್ ಆಗಿದ್ದಾರೆ. ಶವಾಗಾರದ ಬಳಿ ಮೃತ ಬಸನಗೌಡ ಪಾಟೀಲ್ ಪತ್ನಿ, ಪುತ್ರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ತನ್ನ ತಂದೆಯದ್ದು ಲಾಕಪ್ ಡೆತ್ ಆಗಿದೆ. ಕೈ ಮೇಲೆ ಹಗ್ಗದಿಂದ ಕಟ್ಟಿದ್ದ ಮಾರ್ಕ್ ಇತ್ತು. ತಂದೆಯ ಸಾವಿಗೆ ನ್ಯಾಯ ಬೇಕು. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಅಂತಾ ಮೃತ ಬಸನಗೌಡ ಪಾಟೀಲ್ ಪುತ್ರಿ ರೋಹಿಣಿ ಪಾಟೀಲ್ ಹೇಳಿದ್ದಾರೆ. ಇಬ್ಬರು ವೈದ್ಯರ ಸಮ್ಮುಖದಲ್ಲಿ ಬಸನಗೌಡ ಮರಣೋತ್ತರ ಪರೀಕ್ಷೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ವಿಡಿಯೋಗ್ರಾಫಿ ಮಾಡಲಾಗಿದೆ.
ಒಟ್ಟಾರೆ ಪೊಲೀಸರ ವಶದಲ್ಲಿದ್ದ ಆರೋಪಿ ಬಸನಗೌಡ ಪಾಟೀಲ್ ಸಾವಿನ ಸುತ್ತ ನೂರೆಂಟು ಅನುಮಾನ ಇದ್ದು ಸದ್ಯ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಿದೆ. ಈ ಸಾವಿಗೆ ಸ್ಪಷ್ಟ ಕಾರಣ ಏನು ನಿಷ್ಪಕ್ಷಪಾತ ತನಿಖೆಯಿಂದ ಹೊರಬಂದು, ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ.
ಅಣ್ಣಪ್ಪ ಬಾರ್ಕಿ, ಪವರ್ ಟಿವಿ, ಬೆಳಗಾವಿ