ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮೈ ಕೊರೆಯುವ ಚಳಿ ಜೊತೆಗೆ ನಗರದಲ್ಲಿ ತುಂತುರು ಮಳೆ ಆರಂಭವಾಗಿದೆ. ಮಹಾಮಳೆಯ ನಂತರ ರಾಜ್ಯದಲ್ಲಿ ಪ್ರಾರಂಭವಾದ ಚಳಿಯ ಆರ್ಭಟ. ರಾಜ್ಯದೆಲ್ಲೆಡೆ ಮಳೆ ಪ್ರಮಾಣ ತಗ್ಗುತ್ತಿದ್ದಂತೆ ಹೆಚ್ಚಿದ ಚಳಿ.
ರಾಜ್ಯದಲ್ಲಿ ಚಳಿಗಾಲಕ್ಕೆ ಜನರು ತತ್ತರಿಸುವಂತೆ ಮಾಡಿದ್ದು, ಬೆಳಗ್ಗೆಯೇ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. ಬಯಲು ಪ್ರದೇಶಗಳಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುತ್ತಿದೆ.ಮಧ್ಯಾಹ್ನದ ಹೊತ್ತು ಬಿಸಿಲಿನ ಜೊತೆ ತಣ್ಣನೆ ಗಾಳಿ ಜೋರಾಗಿಯೇ ಬೀಸುತ್ತಿದೆ. ವಾತಾವರಣದಲ್ಲಿನ ತೇವಾಂಶ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡಿದೆ. ಇದು ಈಶಾನ್ಯ ದಿಕ್ಕಿನ ಕಡೆಗೆ ಸಾಗುತ್ತಿದೆ.
ಇದರಿಂದ ರಾಜ್ಯದಲ್ಲಿ ಮೋಡ ರಹಿತ ಆಕಾಶ ಸೃಷ್ಟಿಯಾಗುತ್ತಿದೆ. ಮೋಡ ಇಲ್ಲದೇ ಇರುವುದರಿಂದ ಭೂಮಿಯಿಂದ ಹೊರಸೂಸುವ ಶಾಖ ಎಲ್ಲ ಕಡೆ ಹರಡುತ್ತದೆ.
ಇದು ಚಳಿಯನ್ನು ಹೆಚ್ಚಿಸುತ್ತಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಚಳಿ ಅಧಿಕವಾಗಿದೆ. ರಾಜಧಾನಿಯಲ್ಲಿ ಕನಿಷ್ಠ ದಾಖಲೆಯ ತಾಪಮಾನ ದಾಖಲಾಗಿದೆ. ಈ ವರ್ಷದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ಮೊದಲೆರಡು ವಾರಗಳಲ್ಲಿ ದಾಖಲೆ ಮಳೆಯಾಗಿತ್ತು. ಈ ಹಿನ್ನೆಲೆ ಕಾರ್ತಿಕ ಮಾಸ ಆರಂಭಕ್ಕೂ ಮುನ್ನವೇ ರಾಜಧಾನಿಯಲ್ಲಿ ಚಳಿ ಸೃಷ್ಟಿಯಾಗಿತ್ತು.
ಸಹಜವಾಗಿ ಬೆಳಗ್ಗೆ ಎಂಟು ಗಂಟೆಯವರೆಗೂ ಚಳಿ ಇರಲಿದೆ. ಸಂಜೆ ಆರು ಗಂಟೆಗೆ ವಾತಾವರಣ ತಾಪಮಾನ ಇಳಿಕೆಯತ್ತ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 28 – 17 ಡಿಗ್ರಿ ತಾಪಮಾನ ದಾಖಲಾಗಿತ್ತು.