ಕಲಬುರಗಿ : ಪೇ ಸಿಎಂ, ಸೇ ಸಿಎಂ ಪೊಸ್ಟರ್ ಕ್ಯಾಂಪೇನ್ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಂಘರ್ಷ ತಣ್ಣಗಾಗ್ತಿದ್ದಂತೆ ಬಿಸಿಲೂರು ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಮತ್ತೆ ಪೋಸ್ಟರ್ ಪಾಲಿಟಿಕ್ಸ್ ಶುರುವಾಗಿದೆ. ಒಂದೂವರೇ ತಿಂಗಳಿಂದ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆಂದು ಚಿತ್ತಾಪುರ ನಗರದ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.ಬಿಜೆಪಿ ಟಿಕೆಟ್ ಆಕಾಂಕ್ಷಿ ಅರವಿಂದ್ ಚವ್ಹಾಣ್ ಈ ಪೋಸ್ಟರ್ ಅಂಟಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ.. ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ವೃತ್ತದಲ್ಲಿ ದಿಢೀರನೆ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅರವಿಂದ್ ಚವ್ಹಾಣ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ..ಇದರಿಂದ ಕೆರಳಿ ಕೆಂಡವಾಗಿರುವ ಪ್ರಿಯಾಂಕ್ ಖರ್ಗೆ, ಕೇಸರಿ ಪಡೆಗೆ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಪೋಸ್ಟರ್ ಬೇಕಾದ್ರೆ ನಾನೇ ಪ್ರಿಂಟ್ ಹಾಕಿಸಿಕೊಡುವೆ.ಪೋಸ್ಟರ್ ಅಂಟಿಸುವ ಮುನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಅಂತಾ ಪಂಥಾಹ್ವಾನ ನೀಡಿದ್ದಾರೆ.
ಇನ್ನು ಅನುಮತಿ ಇಲ್ಲದೆ ಪಟ್ಟಣದ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಿರುವ ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ್ ವಿರುದ್ದ ನಗರಸಭೆ ಮುಖ್ಯಾಧಿಕಾರಿಗೆ ದೂರು ದಾಖಲಿಸಿದ್ದಾರೆ. ಅಲ್ಲದೆ,ಕಲಬುರಗಿಗೆ ತೆರಳುತ್ತಿದ್ದ ವೇಳೆ ಚಿತ್ತಾಪುರ ತಾಲೂಕಿನ ರಾವೂರ್ ಬಳಿ ಕಾಂಗ್ರೆಸ್ ಕಾರ್ಯಕರ್ತರು, ಪ್ರಿಯಾಂಕ್ ಅಭಿಮಾನಿಗಳು ಅರವಿಂದ್ ಚವ್ಹಾಣ್ ಕಾರು ತಡೆದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ನೂಕಾಟ, ತಳ್ಳಾಟವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಇದೇ ವೇಳೆ ಅರವಿಂದ್ ಚವ್ಹಾಣ್, ಪ್ರಿಯಾಂಕ್ ಖರ್ಗೆ ಅವರ ಪಂಥಾಹ್ವಾನವನ್ನು ಸ್ವೀಕರಿಸಿದ್ದು, ಅಭಿವೃದ್ಧಿ ಕುರಿತ ಬಹಿರಂಗ ಚರ್ಚೆಗೆ ಸಿದ್ಧ ಎಂದಿದ್ದಾರೆ.
ಅದೆನೇ ಇರಲಿ ಪೋಸ್ಟರ್ ಪಾಲಿಟಿಕ್ಸ್‌ನಿಂದ ಚಿತ್ತಾಪುರ ಕ್ಷೇತ್ರದಲ್ಲಿ ಬೂದಿ ಮುಚ್ಚಿದ ಕೆಂಡದಂತಾ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹೈವೋಲ್ಟೇಜ್ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ಪೋಸ್ಟರ್ ಫೈಟ್ ತಾರಕಕ್ಕೇರುತ್ತಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ