ಬೆಂಗಳೂರು : ಗುಂಡಿಗಳದ್ದೇ ಕಾರುಬಾರು. ಈ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ರೂ ಬಿಬಿಎಂಪಿ ಮಾತ್ರ ಡೋಂಟ್ ಕೇರ್ ಅಂತಿದೆ. ಆದ್ರೆ ಶುಕ್ರವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ, ಅವ್ರು ಸಂಚಾರ ಮಾಡುವ ರಸ್ತೆಗಳಿಗೆ ಬಿಬಿಎಂಪಿ ಸುಣ್ಣಬಣ್ಣ ಬಳಿದು, ಸಿಂಗಾರ ಮಾಡಿ, ಹೊಸದಾಗಿ ಟಾರು ಹಾಕ್ತಿದೆ. ಮೋದಿ ಬರುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.ಕಳೆದ ಐದು ತಿಂಗಳಿಂದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ಮುಂಭಾಗದ ರಸ್ತೆ ಯಾವುದೇ ನಿರ್ವಹಣೆ ಆಗಿರಲಿಲ್ಲ. ಸಂಪೂರ್ಣ ರಸ್ತೆಗುಂಡಿಗಳು ಬಿದ್ದಿದ್ದು, ಸವಾರರ ಪರದಾಟ ಇತ್ತು.ಈಗ ಕಳೆದ ಮೂರು ದಿನಗಳಿಂದ ಡಾಂಬರೀಕರಣ ಕಾಮಗಾರಿ ಆರಂಭ ಮಾಡಿ ಲಕ ಲಕ ಹೊಳೆಯುವಂತೆ ಮಾಡಿದ್ದಾರೆ.
ಇನ್ನು ಓಕಳಿಪುರಂ ಅಂಡರ್ ಪಾಸ್ ರಸ್ತೆ, ಫ್ಲೈ ಓವರ್ ನೆಪದಲ್ಲಿ ಅದ್ವಾನವಾಗಿತ್ತು. ಈಗ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಡಾಂಬರೀಕರಣ ಆಗಿದೆ.ಹೀಗಾಗಿ ಜನ ಪಿಎಂ ಸರ್, ನಮ್ ಏರಿಯಾಗೂ ಬನ್ನಿ. ನೀವು ಬಂದ್ರೆ ನಮ್ ಏರಿಯಾದಲ್ಲೂ ಗುಂಡಿಗಳನ್ನ ಮುಚ್ಚುತ್ತಾರೆ. ಇದ್ರಿಂದ ನಮ್ ಸ್ನೇಹಿತರಂತಿರೋ ಜನ, ಸಂಬಂಧಿಕರ ಜೀವ ಉಳಿಯುತ್ತೆ. ಪ್ಲೀಸ್ ಒಮ್ಮೆ ನಮ್ ಏರಿಯಾಗೆ ಬನ್ನಿ ಸರ್ ಅಂತ, ಮೋದಿ ಆಹ್ವಾನದ ಪೋಸ್ಟರ್‌ಗಳನ್ನ ಬಸವೇಶ್ವರನಗರದ ಯುವಕರು, ಬಿಎಂಟಿಸಿ, ಆಟೋ, ಮೆಟ್ರೋ, ಬಸ್ ನಿಲ್ದಾಣಗಳಲ್ಲಿ ಪೋಸ್ಟರ್‌ಗಳನ್ನ ಅಂಟಿಸ್ತಿದ್ದಾರೆ.
ರಾಜಾಜಿನಗರ ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಂಜುನಾಥನಗರ, ಕಾಮಾಕ್ಷಿಪಾಳ್ಯ, ವಿಜಯನಗರದ ಸೇರಿದಂತೆ ಹಲವೆಡೆ ಆಟೋ, ಬಿಎಂಟಿಸಿ ಬಸ್‌ಗಳಿಗೂ ಇಂಥಾ ಪೋಸ್ಟರ್‌ಗಳನ್ನು ಅಂಟಿಸಿ, ಬಿಬಿಎಂಪಿಯ ವಿರುದ್ಧ ಜನ ವ್ಯಂಗವಾಡಿದ್ದಾರೆ. ಅಂಗಡಿ, ಸಾರ್ವಜನಿಕ ಶೌಚಾಲಯಗಳ ಗೋಡೆಗಳಿಗೂ ಈ ಪೋಸ್ಟರ್‌ಗಳನ್ನ ಅಂಟಿಸಲಾಗಿದೆ. ಇದನ್ನ ಗಮನಿಸಿದ ಜನ, ನಮ್ ಏರಿಯಾಕ್ಕೂ ಪಿಎಂ ಸರ್‌ಗೆ ಇನ್ವೈಟ್ ಮಾಡ್ಬೇಕು ಅಂತಿದ್ದಾರೆ.40 % ಸರ್ಕಾರದಲ್ಲಿ ಎಲ್ಲವೂ ಕಳಪೆ ಅಂತ ಆಟೋ ಚಾಲಕರು ತಿಳಿಸಿದ್ರು.
ರಸ್ತೆ ಗುಂಡಿ ಮುಚ್ಚದ ಸರ್ಕಾರದ ವಿರುದ್ಧ ಜನಸಾಮಾನ್ಯರ ಆಕ್ರೋಶವೂ ಹೆಚ್ಚಾಗಿದೆ.ಮೋದಿ ಬೆಂಗಳೂರಿಗೆ ಬರ‍್ತಾರೆ ಅಂತ ರಸ್ತೆ, ದುರಸ್ತಿ ಕಾರ್ಯ ಮಾಡುವ ಬಿಬಿಎಂಪಿಗೆ ಜನ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಆಗಾಗ ಬೆಂಗಳೂರಿಗೆ ಬಂದ್ರೆ, ನಗರದ ರಸ್ತೆಗಳು ಕ್ಲೀನ್ ಆಗಿರುತ್ತವೆ. ಇಲ್ಲದಿದ್ದರೆ ಯಾವ ರೋಡ್ ಕೂಡ ಸರಿಯಿರಲ್ಲ ಅಂತ ಕಿಡಿ ಕಾರಿದ್ದಾರೆ.ಇನ್ನು ಬಿಬಿಎಂಪಿ ಕಮಿಷನರ್ ಮಾತನಾಡಿ, ಕಳೆದ ಬಾರಿ ಮೋದಿ ಬಂದಿದ್ದಾಗಲೂ 13 ಕೋಟಿ ವೆಚ್ಚದಲ್ಲಿ ರಸ್ತೆ ಸರಿ ಮಾಡಿದ್ರು .. ಆದ್ರೆ ಈ ಬಾರಿ ರಸ್ತೆಗೆ ಅನುಗುಣವಾಗಿ ಖರ್ಚು ವೆಚ್ಚ ಆಗಿದೆ ಅಂತ ತಿಳಿಸಿದ್ರು.
ಬಿಬಿಎಂಪಿ ವಿರುದ್ಧ ಅದೆಷ್ಟೋ ಪ್ರತಿಭಟನೆಗಳಾದ್ರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ. ರಸ್ತೆಗುಂಡಿ ವಿಚಾರಕ್ಕೆ ಪ್ರಧಾನಿಗಳಿಗೆ ಆಹ್ವಾನ ಕೊಡುವ ಈ ಪೋಸ್ಟರ್ ಅಭಿಯಾನ ಸರ್ಕಾರ ಹಾಗೂ ಬಿಬಿಎಂಪಿಗೆ ಮುಜುಗರ ತರೋದಂತೂ ಸತ್ಯ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು