Monday, December 23, 2024

ತೋಗೂರು ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಲಂಚಾವತಾರ

ಆನೇಕಲ್​ : ಹತ್ತು ಸಾವಿರ ಕೊಡಿ, 13,000 ಕೊಡಿ ಎಂದು ಲಂಚವನ್ನು ಕೇಳಿ ಪಡೆದು ಹಣ ಎಣಿಸುತ್ತಿರುವ ವ್ಯಕ್ತಿಯ ಹೆಸರು ಜ್ಞಾನೇಶ. ಈತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ದೊಡ್ಡ ತೋಗೂರು ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದೀಗ ಈತನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪವರ್ ಟಿವಿ ಬಯಲಿಗೆಳೆದಿದೆ. ಹೌದು, ಬಿಲ್ಡಿಂಗ್ ಶಾಪ್ ಒಂದರ ಜನರಲ್ ಲೈಸೆನ್ಸ್ ಪಡೆಯಲು ದೊಡ್ಡತೋಗೂರು ಪಂಚಾಯಿತಿಯ ಬಿಲ್ ಕಲೆಕ್ಟರ್ ಜ್ಞಾನೇಶ 13000 ರೂ.ಗಳ ಲಂಚವನ್ನು ಕೇಳಿ ಪಡೆದಿದ್ದಾನೆ. ಹಾಗೆ ಲಂಚವನ್ನು ನೀಡುತ್ತಿರುವಾಗ ಸಾರ್ವಜನಿಕರೇ ಈ ವಿಡಿಯೋವನ್ನು ಮಾಡಿ ಪವರ್ ಟಿವಿ ಕಚೇರಿಗೆ ತಲುಪಿಸಿ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ .

ಇನ್ನು ಈ ಪಂಚಾಯಿತಿಯಲ್ಲಿ ಇದೊಂದೇ ಅಲ್ಲದೆ ಇದಕ್ಕೂ ಮೊದಲು ಸಾಕಷ್ಟು ಜನರ ಬಳಿ ಹಣವನ್ನು ಪಡೆದಿರುವಂತಹ ಆರೋಪಗಳು ಸಾಕಷ್ಟು ಕೇಳಿಬಂದಿವೆ. ಆದರೆ, ಸರಿಯಾದ ರೀತಿಯ ಸಾಕ್ಷ್ಯಾಧಾರಗಳು ಸಿಕ್ಕಿರಲಿಲ್ಲ. ಆದರೆ, ಇದೀಗ ಲಂಚ ಪಡೆಯುತ್ತಿರುವಾಗಲೇ, ಬಿಲ್ ಕಲೆಕ್ಟರ್ ಜ್ಞಾನೇಶ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಇದು ಇಲ್ಲಿನ ಭ್ರಷ್ಟಾಚಾರಕ್ಕೆ ಅತಿ ದೊಡ್ಡ ಉದಾಹರಣೆಯಾಗಿದೆ. ದೊಡ್ಡತೋಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಸಾಕಷ್ಟು ಕಮರ್ಷಿಯಲ್ ಇದ್ದು, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಂತಹವರನ್ನು ಪವರ್ ಟಿವಿ ಕ್ಯಾಮರಾ ಎಂದಿಗಾದರೂ ಬಯಲಿಗೆಳೆಯುತ್ತದೆ.

ಇನ್ನು ಕೇವಲ ಈ ಪಂಚಾಯಿತಿ ಮಾತ್ರವಲ್ಲದೆ, ಬಹುತೇಕ ಎಷ್ಟೋ ಪಂಚಾಯತಿಗಳಲ್ಲಿ ಇದೇ ರೀತಿ ಭ್ರಷ್ಟಾಚಾರ ನಡೆಯುತ್ತಿದ್ದು, ಪವರ್ ಟಿವಿ ಅಂತಹ ಭ್ರಷ್ಟರ ವಿರುದ್ಧ ಎಂದಿಗೂ ಹೋರಾಡುತ್ತದೆ. ಸಾರ್ವಜನಿಕರು ಇನ್ನಾದರೂ ಎಚ್ಚೆತ್ತುಕೊಂಡು ಲಂಚವನ್ನು ಕೇಳಿದವರಿಗೆ ಈ ರೀತಿಯ ತಕ್ಕ ಶಾಸ್ತಿಯನ್ನು ಮಾಡಬೇಕು. ಜೊತೆಗೆ ಅಧಿಕಾರಿಗಳು ಬಿಲ್ ಕಲೆಕ್ಟರ್​ನ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಿದೆ.

ರಾಘವೇಂದ್ರ ಪವರ್ ಟಿವಿ ಆನೇಕಲ್

RELATED ARTICLES

Related Articles

TRENDING ARTICLES