ಕಾಂತಾರ ಸಿನಿಮಾ ಯಾರೂ ಸರಿಗಟ್ಟಲಾಗದ ದಾಖಲೆ ಬರೆದಿದೆ. ಈ ಚಿತ್ರಕ್ಕೆ ಸರಿಸಾಟಿಯಾಗುವ ಕಥೆಯೂ ಇಲ್ಲವೆಂಬಂತೆ ಎಲ್ಲರ ಮನಸೂರೆಗೊಂಡಿದೆ. ಕಂಡು ಕೇಳರಿಯದ ಕಥೆ, ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಪಟ ಮಾಡಿದೆ. ಇದೀಗ ಕಾಂತಾರ ದಾಖಲೆಗಳ ಸರಮಾಲೆಗೆ ಮತ್ತೊಂದು ಕೊಂಡಿ ಸೇರಿಕೊಂಡಿದೆ. ಯೆಸ್.. ಏನಿದು ಹೊಸ ವಿಷ್ಯ ಅಂತೀರಾ..? ನೀವೇ ಓದಿ.
- ದೇಶ ವಿದೇಶಗಳಲ್ಲೂ ಕಲೆಕ್ಷನ್ನಲ್ಲಿ ಕಾಂತಾರ ಮಿಂಚಿನ ವೇಗ..!
ಕರಾವಳಿಯ ಪ್ರಾದೇಶಿಕತೆಯ ಚಿತ್ರಕ್ಕೆ ಯಾರೂ ಕಂಡು ಕೇಳರಿಯದ ರೆಸ್ಪಾನ್ಸ್ ಸಿಕ್ಕಿದ್ದು ಸ್ಯಾಂಡಲ್ವುಡ್ ಇತಿಹಾಸದಲ್ಲಿ ದಾಖಲೆಯೇ ಸರಿ. ರಿಲೀಸ್ ಆದ ದಿನದಿಂದ್ಲೂ ಯಾರೂ ಊಹೆ ಕೂಡ ಮಾಡದ ಮಟ್ಟಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡ್ತಿದೆ ಕಾಂತಾರ. ಒಟ್ಟಾರೆ 400 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿ, ಸಿನಿಪಂಡಿತರ ಲೆಕ್ಕಾಚಾರಗಳನ್ನು ಉಲ್ಟಾ ಪಲ್ಟಾ ಮಾಡಿದ ಮೋಸ್ಟ್ ಇಂಟ್ರೆಸ್ಟಿಂಗ್ ಕಹಾನಿ ಇದು.
ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದ ಚಿತ್ರ, ಪರಭಾಷೆಗಳಿಗೂ ಡಬ್ ಆಗಿ ಕಮಾಲ್ ಮಾಡ್ತಿದೆ. ಜೊತೆಗೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸ್ಯಾಂಡಲ್ವುಡ್ ಅಂದ್ರೆ ನಿಬ್ಬೆರಗಾಗುವಂತೆ ಮಾಡಿದೆ. ರಿಷಬ್ ಶೆಟ್ಟಿ ಆ್ಯಕ್ಟಿಂಗ್ ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ಹಿಂದೆ ಒಂದೇ ಥಿಯೇಟರ್ನಲ್ಲಿ ಒಂದು ಲಕ್ಷದ 30 ಸಾವಿರ ಟಿಕೆಟ್ ಮಾರಾಟವಾಗಿ ಮ್ಯಾಜಿಕ್ ಮಾಡಿದ್ದ ಕಾಂತಾರ ಮತ್ತೊಂದು ಹೊಸ ದಾಖಲೆ ಬರೆದಿದೆ. ಕರುನಾಡಿನಲ್ಲೇ ಒಂದು ಕೋಟಿ ಕಾಂತಾರ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಅಲ್ಲಿಗೆ ನಮ್ಮ ಕರ್ನಾಟಕ ಒಂದರಲ್ಲೇ ಕೋಟಿ ಟಿಕೆಟ್ಸ್ ಅಂದ್ರೆ, ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ಗಳಿಂದ ಆವರೇಜ್ 180- 200 ರೂಪಾಯಿ ಅಂದುಕೊಂಡರೂ 180ರಿಂದ 200 ಕೋಟಿ ಕರುನಾಡಲ್ಲೇ ಗಳಿಸಿದೆ ಕಾಂತಾರ. ಉಳಿದಂತೆ ಪಕ್ಕದ ಆಂಧ್ರದಲ್ಲಿ 50 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ. ತಮಿಳು, ಮಲಯಾಳಂನಲ್ಲಿ ಅಲ್ಲಿನ ಪ್ರಾದೇಶಿಕ ಚಿತ್ರಗಳು ಕೂಡ ದಂಗಾಗೋ ರೇಂಜ್ಗೆ ಪೈಸಾ ವಸೂಲ್ ಮಾಡ್ತಿದೆ.
- ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ರಿಷಬ್ ಮಿಂಚು
- 500 ಕೋಟಿ ಕ್ಲಬ್ನತ್ತ ಕಾಂತಾರ ಬಾಕ್ಸ್ ಆಫೀಸ್ ಕಿಚ್ಚು
ಅಬ್ಬಬ್ಬಾ..! ಕರ್ನಾಟಕದಲ್ಲೇ ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟ ಮಾಡಿದ ದಾಖಲೆ ಕಾಂತಾರ ಚಿತ್ರದ ಪಾಲಾಗಿದೆ. ಹೊಂಬಾಳೆ ಬ್ಯಾನರ್ ಸದ್ಯ ಯಶಸ್ಸಿನ ಉತ್ತುಂಗದಲ್ಲಿದೆ. ಕಾಂತಾರ ರಿಲೀಸ್ ದಿನದಿಂದ್ಲೂ ಇಂದಿಗೂ ಅದೇ ಕ್ರೇಜ್ ಕ್ರಿಯೇಟ್ ಮಾಡಿದೆ. ಮೌತ್ ಟು ಮೌತ್ ಪ್ರಚಾರ ಗಿಟ್ಟಿಸಿದ ಕಾಂತಾರ ಗಲ್ಲಿಯಿಂದ ದಿಲ್ಲಿವರೆಗೂ ವ್ಯಾಪಿಸಿದೆ. ವಿದೇಶಗಳಲ್ಲೂ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ.
ಶರವೇಗದಲ್ಲಿ ಮುನ್ನುಗ್ತಿರೋ ಕಾಂತಾರ ಹಲವು ವಿವಾದಗಳಿಗೆ ತತ್ತಾದ್ರೂ ಇಂದಿಗೂ ಪ್ರೇಕ್ಷಕರ ಮೋಸ್ಟ್ ಫೇವರಿಟ್. ರಿಪೀಟ್ ಮೋಡ್ನಲ್ಲಿ ಸಿನಿಮಾ ಎಂಜಾಯ್ ಮಾಡ್ತಿರೋದ್ರಿಂದ ಕಾಂತಾರ ಟಾಪ್ ಗೇರ್ನಲ್ಲಿದೆ. ಇನ್ನು ಒಂದೇ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಿಷಬ್ ಹೊರಹೊಮ್ಮಿದ್ದಾರೆ. ರಜನಿಕಾಂತ್, ಅಮಿತಾಭ್, ಧನುಷ್, ಎಬಿಡಿ ಹೀಗೆ ಎಲ್ಲರ ಉಸಿರಲ್ಲೂ ಪಂಜುರ್ಲಿ ಕೋಲ ಹಸಿರಾಗಿದೆ.
ಕಾಂತಾರ ಚಿತ್ರದ ಮೂಲಕ ಸೌತ್ ಸಿನಿಮಾಗಳ ಸುವರ್ಣ ಯುಗ ಶುರುವಾಗಿದೆ. ಅಬ್ಬರ, ಆಡಂಭರವಿಲ್ಲದೇ ಜಸ್ಟ್ 15 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ, 400 ಕೋಟಿ ಗಳಿಸಿ, 500 ಕೋಟಿ ಕ್ಲಬ್ನತ್ತ ಮುನ್ನುಗ್ತಿರೋದು ಅಚ್ಚರಿಯ ಸಂಗತಿ. ಅಜನೀಶ್ ಮ್ಯೂಸಿಕ್, ರಿಷಬ್ ಸೇರಿದಂತೆ ಸ್ಥಳಿಯ ಕಲಾವಿದ್ರ ಸ್ವಾಭಾವಿಕ ನಟನೆ, ಧೈವದ ಮಹಿಮೆ ಎಲ್ಲವೂ ಕಾಂತಾರವನ್ನು ಗಡಿ ಮೀರಿ ಸದ್ದು ಮಾಡುವಂತೆ ಮಾಡಿದೆ. ಎನಿವೇ, ಇನ್ನಷ್ಟು ದಾಖಲೆಗಳು ಕಾಂತಾರ ಚಿತ್ರದ ಪಾಲಾಗಲಿ ಎಂದು ಆಶೀಸೋಣ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ