ಬಾಗಲಕೋಟೆ : ಹೀಗೆ ಎತ್ತ ನೋಡಿದರೂ ಸಾಕು ಅತ್ತ ಕಣ್ಮನ ಸೆಳೆಯೋ ಹಿನ್ನೀರಿನ ಪ್ರದೇಶ, ಎಲ್ಲೆಂದರಲ್ಲಿ ಹಾರಾಡುತ್ತಿರುವ ಪಕ್ಷಿಗಳು. ಪ್ರಕೃತಿ ಸೋಜಿಗದ ಮಧ್ಯೆ ಗಮನ ಸೆಳೆಯೋ ಬೆಟ್ಟ-ಗುಡ್ಡ. ಅಂದ ಹಾಗೆ ಇಂತಹವೊಂದು ದೃಶ್ಯ ಕಂಡು ಬರೋದು ಬಾಗಲಕೋಟೆಯಲ್ಲಿ. ಆಲಮಟ್ಟಿ ಹಿನ್ನೀರಿನಿಂದ ಕಂಗೊಳಿಸುವ ಹಿನ್ನೀರು ಪ್ರದೇಶವಿದು. ಇಲ್ಲಿಗೆ ದೇಶ, ವಿದೇಶಗಳಿಂದಲೂ ಹಕ್ಕಿ ಪಕ್ಷಿಗಳು ವಲಸೆ ಬಂದು, ಗೂಡು ಕಟ್ಟಿ ಸಂಸಾರ ನಡೆಸಿ, ತೆರಳ್ತವೆ.
ಆಸ್ಟ್ಟೇಲಿಯಾದಿಂದ ಆಲಮಟ್ಟಿ ಹಿನ್ನೀರಿಗೆ ಬರುವ ಓರಿಯಂಟಲ್ ಪ್ಯಾಟಿಂಕೋಲ್ ಮತ್ತು ರಷ್ಯಾ,ಮಂಗೋಲಿಯಾದಿಂದ ಬರುವ ಬಾರೆಡೆಡ್ ಗೀಜ್ ಪಕ್ಷಿಗಳು ಜನರನ್ನು ಆಕರ್ಷಿಸುತ್ತವೆ.ಸುಮಾರು 34 ಜಾತಿಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿ ಪಕ್ಷಿಧಾಮವಾಗಬೇಕು ಎಂಬ ಕೂಗು ಬಹಳ ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಪಕ್ಷಿಧಾಮಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅಧಿಸೂಚನೆ ಹೊರಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಉತ್ತರಪ್ರದೇಶದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ರಿವರ್ಟನ್ ಪಕ್ಷಿಗಳ 20 ಸಾವಿರಕ್ಕೂ ಅಧಿಕ ಗೂಡುಗಳು ಆಲಮಟ್ಟಿ ಹಿನ್ನೀರಿನಲ್ಲಿ ಕಂಡು ಬಂದಿದ್ದು, ಇದು ಜಗತ್ತಿನ ಅತಿಹೆಚ್ಚು ರಿವರ್ಟನ್ ಪಕ್ಷಿಗಳ ಗೂಡು ಇರುವ ಪ್ರದೇಶವೆಂದು ಗುರುತಿಸಲಾಗಿದೆ. ಈ ಮಧ್ಯೆ ಬಹಳ ದಿನಗಳಿಂದ ಇದ್ದ ಪಕ್ಷಿಧಾಮದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಿ ಪಕ್ಷಿಧಾಮ ನಿರ್ಮಾಣವಾಗುವಂತಾಗಲಿ ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸುಂದರ ಪ್ರಕೃತಿ ಮಧ್ಯೆ ಸೋಜಿಗವನ್ನು ಸೃಷ್ಟಿಸುತ್ತಿದ್ದ ಪಕ್ಷಿಗಳ ಸಂರಕ್ಷಣೆಗಾಗಿ ಸರ್ಕಾರ ಬಾಗಲಕೋಟೆ ಜಿಲ್ಲೆಯ ಚಿಕ್ಕಸಂಗಮ ಬಳಿ ಪಕ್ಷಿಧಾಮ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಿ ಪಕ್ಷಿಧಾಮ ನಿರ್ಮಾಣವಾಗಲಿ ಅನ್ನೋದೆ ಎಲ್ಲರ ಆಶಯ.
ನಿಜಗುಣ ಮಠಪತಿ, ಪವರ್ ಟಿವಿ ಬಾಗಲಕೋಟೆ