ಶಿವಮೊಗ್ಗ: ತಾಲೂಕು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ದಂಪತಿಯೊಬ್ಬರು ದಯಾ ಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಸಾಗರ ತಾಲೂಕು ಸಾಗರ ಉಪವಿಭಾಗಧಿಕಾರಿ ಮೂಲಕ ಮನವಿ ಮಾಡಿದ ಶ್ರೀಕಾಂತ್ ನಾಯ್ಕ್ ದಂಪತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಕಮ್ಮಾರ್ 10 ಲಕ್ಷ ರೂ. ಲಂಚ ಕೇಳಿದ್ದಾರೆ. ಸರ್ಕಾರಿ ಸೇವೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಆರ್ಥಿಕವಾಗಿ, ಮಾನಸಿಕವಾಗಿ ನಷ್ಟ ಹೊಂದಿದ್ದೆವೆಂದು ಅಳಲು ತೊಡಿಕೊಂಡ ಈ ದಂಪತಿ, ಕಳೆದ 18 ತಿಂಗಳಿನಿಂದ ತಾಲೂಕು ಪಂಚಾಯತಿ ಅಭಿವೃದ್ಧಿ ಅಧಿಕಾರಿ ತೊಂದರೆ ನೀಡುತ್ತಿರುವುದಾಗಿ ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ನನ್ನ ಮಾಲಿಕತ್ವದ ಜಮೀನಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಅನುಮೋದನೆಗೊಂಡ ನಕಾಶೆಯಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ನನ್ನ ಜಮೀನಿನ 60% ಭಾಗದಲ್ಲಿ ನಿವೇಶನ ಬಿಡುಗಡೆ ಮಾಡುವ ಸಂಬಂಧ 10 ಲಕ್ಷ ರೂ. ಲಂಚದ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆಂದು ಆರೋಪ ಮಾಡಲಾಗಿದೆ.
ನಿವೇಶನ ಬಿಡುಗಡೆ ಮಾಡಬಾರದೆಂದು ಯಾವುದೇ ನ್ಯಾಯಾಲಯವು ತಡೆಯಾಜ್ಞೆ ಆದೇಶ ನೀಡಿಲ್ಲ. ಬಡ ರೈತರಾದ ನಮಗೆ ಇಲ್ಲ ಸಲ್ಲದ ಕಾರಣಗಳನ್ನು ನೀಡುತ್ತಾ ನಮಗೆ ಆರ್ಥಿಕ ನಷ್ಟ ಮಾಡಿ, ಆರೋಗ್ಯ ಸಮಸ್ಯೆ ಉಂಟುಮಾಡಿದ್ದಾರೆಂದು ಈ ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ವಿಚಾರಗಳನ್ನು ಪ್ರಸ್ತಾಪ ಮಾಡಿ ಕಾಲಹರಣ ಮಾಡಿ ನಮ್ಮ ಜೀವನವನ್ನು ಅಧೋಗತಿಗೆ ತಂದಿದ್ದಾರೆ. ಅಧಿಕಾರಿಗಳು ನಮಗೆ ತೊಂದರೆ ನೀಡುತ್ತಿದ್ದಾರೆ. ಶೀಘ್ರವಾಗಿ ನಮ್ಮ ದಯಾಮರಣ ಕೋರಿಕೆ ಮನ್ನಿಸಬೇಕೆಂದು ರಾಷ್ಟ್ರಪತಿಗೆ ಸಾಗರದ ಶ್ರೀಕಾಂತ್ ನಾಯ್ಕ್, ಪತ್ನಿ ಸುಜಾತ ನಾಯ್ಕ್ ಮನವಿ ಮಾಡಿದ್ದಾರೆ.