Thursday, January 23, 2025

ಮಂಗಳೂರು ಮಳಲಿ ಮಸೀದಿ ವಿವಾದ : ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ

ಮಂಗಳೂರು : ತೀವ್ರ ಕುತೂಹಲ ಮೂಡಿಸಿದ್ದ ಮಂಗಳೂರಿನ ಮಳಲಿ ಮಸೀದಿ ಕುರಿತ ವಿವಾದ ಮತ್ತೆ ಸುದ್ದಿಗೆ ಬಂದಿದೆ. ಮಸೀದಿ ಕಮಿಟಿ ಕೋರ್ಟಿಗೆ ಸಲ್ಲಿಸಿದ್ದ ವಕ್ಫ್ ಆಸ್ತಿಯೆಂಬ ತಕರಾರು ಅರ್ಜಿಯನ್ನ ಮಂಗಳೂರಿನ 3ನೇ ಸಿವಿಲ್ ಮತ್ತು ಜೆಎಂಎಫ್ ಕೋರ್ಟ್ ವಜಾಗೊಳಿಸಿದೆ. ಮಳಲಿ ಮಸೀದಿ ವಕ್ಫ್ ಆಸ್ತಿಯಾಗಿದ್ದು ಸಿವಿಲ್ ಕೋರ್ಟಿನಲ್ಲಿ ನಿರ್ಧರಿಸಲು ಅಧಿಕಾರ ವ್ಯಾಪ್ತಿ ಇಲ್ಲವೆಂದು ಮಸೀದಿ ಕಮಿಟಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅದೀಗ ವಜಾಗೊಂಡಿದ್ದು, ಹಿಂದೂ ಸಂಘಟನೆಗಳ ಪರ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.

ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲಿಯೇ ಅರ್ಜಿಯ ವಿಚಾರಣೆ ನಡೆಯಲಿದ್ದು, ಕೋರ್ಟ್ ಕಮಿಷನರ್ ನೇಮಿಸಿ, ಮಸೀದಿ ಸರ್ವೇ ನಡೆಸಬೇಕು ಎಂದು ವಿಎಚ್​ಪಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ವಿಎಚ್​ಪಿ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜನವರಿ 8, 2023ಕ್ಕೆ ಮುಂದೂಡಿದೆ.

ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಹಿಂದೂ ಸಂಘಟನೆಗಳು, ಇದು ಹಿಂದುಗಳಿಗೆ ಸಿಕ್ಕ ಮೊದಲ ಜಯವೆಂದು ವ್ಯಾಖ್ಯಾನಿಸಿವೆ. ನಾವು ಮೊದಲಿನಿಂದಲೂ ಮಸೀದಿಯಲ್ಲ, ಅದೊಂದು ದೇವಸ್ಥಾನ. ನಮಗೆ ಬಿಟ್ಟು ಕೊಡಿ ಎಂದು ಹೇಳುತ್ತಾ ಬಂದಿದ್ದೇವೆ. ಈ ಬಗ್ಗೆ ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸುವಂತೆ ಕೋರಿದ್ದೆವು. ಕೋರ್ಟ್ ಹೋರಾಟದ ಬಳಿಕ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್​ವೆಲ್​ ಹೇಳಿದ್ದಾರೆ.

ಮಳಲಿ ಮಸೀದಿಯಲ್ಲಿ ಹಿಂದೆ ಏನಿತ್ತು ಎಂದು ತಿಳಿಯಲು ಕೋರ್ಟ್ ಕಮಿಷನ್ ಮೂಲಕ ಸರ್ವೆ ನಡೆಸಬೇಕು ಎನ್ನುವ ಆಗ್ರಹವನ್ನು ಹಿಂದೂ ಸಂಘಟನೆಗಳ ನಾಯಕರು ಮುಂದಿಟ್ಟಿದ್ದಾರೆ. ಮಸೀದಿಯೋ, ದೇವಸ್ಥಾನವೋ ಅನ್ನುವ ಪ್ರಶ್ನೆಗೆ ಉತ್ತರ ತಿಳಿಯಲು ಉತ್ಖನನ ಆಗಬೇಕೆಂದು ಹೇಳಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸರ್ವೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.. ವಿವಾದ ಕುರಿತಾಗಿ ಎರಡೂ ಕಡೆಯಿಂದ ಏಳೆಂಟು ಅರ್ಜಿಗಳು ಕೋರ್ಟಿಗೆ ಸಲ್ಲಿಕೆಯಾಗಿದ್ದು ವಿಚಾರಣೆಗೆ ಬರಲಿವೆ. ಇದರ ನಡುವೆ, ವಕ್ಫ್ ಆಸ್ತಿಯೆಂದು ಹೇಳಿ ಸಿವಿಲ್ ಕೋರ್ಟಿನ ಅಧಿಕಾರ ವ್ಯಾಪ್ತಿ ಬಗ್ಗೆ ಪ್ರಶ್ನಿಸಿದ್ದ ಅರ್ಜಿ ವಜಾಗೊಂಡಿದೆ.

ಸದ್ಯಕ್ಕೆ ಕೋರ್ಟಿನಲ್ಲಿ ವಕಾಲತ್ತು ನಡೆಯುತ್ತಿದ್ದು, ಒಂದು ಅರ್ಜಿಯಷ್ಟೇ ಇತ್ಯರ್ಥವಾಗಿದೆ. ಕೋರ್ಟ್ ತೀರ್ಪನ್ನು ಸ್ವಾಗತಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಗಿರಿಧರ್ ಶೆಟ್ಟಿ, ಪವರ್ ಟಿವಿ, ಮಂಗಳೂರು

RELATED ARTICLES

Related Articles

TRENDING ARTICLES