ಉಡುಪಿ: ಕಾಂಗ್ರೆಸ್ ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಿಂದುಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಹಿಂದೂ ಪದ ಅಶ್ಲೀಲ ಅರ್ಥ ಹೊಂದಿದೆ ಎಂದು ಸತೀಶ್ ಜಾರಕಿಹೊಳಿ ಅವರು ಇತ್ತೀಚಿಗೆ ಚಿಕ್ಕೋಡಿಯ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ್ದರು. ಈ ಬಗ್ಗೆ ಇಂದು ಉಡುಪಿಯಲ್ಲಿ ಯಡಿಯೂರಪ್ಪ ಅವರು ಮಾತನಾಡಿದರು.
ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನ ಖಂಡನೆ ಮಾಡಿದರೆ ಸಾಲುವುದಿಲ್ಲ. ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದರೆ ಅದೊಂದು ಭ್ರಮೆ. ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು ಎಂದರು.
ಅಂತೆಯೇ ಮಾತನಾಡಿದ ಮಾಜಿ ಸಿಎಂ, ಮುಖ್ಯಮಂತ್ರಿಗಳು ಜತೆಗೆ ಕರಾವಳಿ ಭಾಗದಲ್ಲಿ ನಾನು ಪ್ರವಾಸ ಮಾಡಿದ್ದೇನೆ. ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ನೂರಕ್ಕೆ ನೂರು ನಮ್ಮ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ಆದರೆ, ಬಾದಾಮಿ ಕ್ಷೇತ್ರವನ್ನು ಯಾಕೆ ಬಿಟ್ಟು ಬರುತ್ತಿದ್ದಾರೆ ತಿಳಿಯುತ್ತಿಲ್ಲ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತವಾಗಿದೆ ಎಂದು ತಿಳಿದಿರಬೇಕು ಎಂದರು.