ಬೆಳಗಾವಿ : 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಇಂದು ಸಂಗೊಳ್ಳಿಗೆ ಭೇಟಿ ನೀಡಲು ಬೆಳಗಾವಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲೂ ಇದೇ ಪ್ರಶ್ನೆ ಎದುರಾಯ್ತು. ತಮ್ಮನ್ನು ಬದಾಮಿಯ ಜನ ತಿರಸ್ಕರಿಸಿಲ್ಲ. ಈಗಲೂ ಸಹ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಬಾದಾಮಿ ದೂರ ಇರುವ ಕಾರಣದಿಂದ ಶಾಸಕನಾಗಿ ಕರ್ತವ್ಯ ನಿರ್ವಹಿಸಲು, ಜನರ ಕಷ್ಟ ನಷ್ಟಗಳನ್ನು ಆಲಿಸಲು ಕಷ್ಟವಾಗುತ್ತಿರುವ ಕಾರಣದಿಂದ ತಾವೇ, ಬೇರೆ ಕ್ಷೇತ್ರಕ್ಕೆ ವಲಸೆ ಹೋಗಲು ನಿರ್ಧಾರ ಮಾಡಿರುವುದಾಗಿ ಸಿದ್ದರಾಮಯ್ಯ ಹೇಳಿದ್ರು.
ಇದೇ ವೇಳೆ ತಮಗೆ ಕೋಲಾರ, ವರುಣಾ ಮತ್ತು ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಒತ್ತಾಯವಿರುವುದು ನಿಜ ಎಂದು ಸಿದ್ದರಾಮಯ್ಯ ಒಪ್ಪಿಕೊಂಡರು. ತಮಗಾಗಿ ಕ್ಷೇತ್ರವನ್ನು ಬಿಟ್ಟುಕೊಡಲು ಪುತ್ರ ಯತೀಂದ್ರ ಮತ್ತು ಜಮೀರ್ ಅಹಮದ್ ಸಿದ್ದರಾಗಿದ್ದಾರೆ. ಆದರೆ, ತಾವೇ ಯಾವುದೇ ನಿರ್ಧಾರ ಮಾಡಿಲ್ಲ ಎಂದರು. ಇದೇ ವೇಳೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋಗಿ ಕೆಟ್ಟರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹೇಗೂ ಭದ್ರಾವತಿಯಲ್ಲಿ ಅಪ್ಪಾಜಿಗೌಡರ ನಿಧನದಿಂದ ಜಾಗ ಖಾಲಿ ಇದೆ. ಇಲ್ಲಿ ಬೇಕಾದರೆ ಇಬ್ರಾಹಿಂ ಸ್ಪರ್ಧೆ ಮಾಡಲಿ, ಕಳೆದ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿ, ಇಬ್ರಾಹಿಂಗೆ ಭದ್ರಾವತಿಯಿಂದ ಟಿಕೆಟ್ ಕೊಡಲಾಗಿತ್ತು. ಆದರೆ, ಇಲ್ಲಿ ಅವರಿಗೆ ಠೇವಣಿಯೂ ಬರಲಿಲ್ಲ. ಅಂದರೆ, ಸಿ.ಎಂ.ಇಬ್ರಾಹಿಂ ಅವರ ಲೆಕ್ಕಾಚಾರವೇ ಸರಿಯಿಲ್ಲ ಎಂದರ್ಥ ಎಂದರು.
ಸಿದ್ದರಾಮಯ್ಯ ಕ್ಷೇತ್ರವೇ ಇಲ್ಲದೆ ಅಲೆಯುತ್ತಿದ್ದಾರೆ. ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪಗಳಿಗೆ ಸಿದ್ದರಾಮಯ್ಯ ಒಮ್ಮೆಗೆ ತಿರುಗೇಟು ನೀಡಿದರೂ ಸಹ, ತಾವು 2023ರಲ್ಲಿ ವಿಧಾನಸಭೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸೋದು ಎನ್ನುವಗುಟ್ಟು ಮಾತ್ರ ಅವರು ಬಿಟ್ಟುಕೊಡಲಿಲ್ಲ.