ಹುಬ್ಬಳ್ಳಿ : ವಾರ್ಡ್ ನಂಬರ್ 52ರ ಕಾರ್ಪೊರೇಟರ್ ಚೇತನ್ ಹಿರೇಕೆರೂರು ಮತ್ತೆ ತನ್ನ ಪಟಾಲಂ ಜೊತೆ ಜೈಲುಪಾಲಾಗಿದ್ದಾನೆ. ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಗರದ ಪ್ರತಿಷ್ಠಿತ, ಸಾಕಷ್ಟು ಗಲಾಟೆ ತಾಣವಾಗಿರುವ ಐಸ್ ಕ್ಯೂಬ್ ಪಬ್‌ನಲ್ಲಿ ರಾಹುಲ್ ಎನ್ನುವ ಯುವಕನ ಜೊತೆ ಕಿರಿಕ್ ಆಗಿ ಮೂರ್ನಾಲ್ಕು ಜನರಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಗೊಳಗಾದ ರಾಹುಲ್ ತಲೆಗೆ ತೀವ್ರ ಪೆಟ್ಟಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದ ಬಳಿಕ ಗಾಯಾಳು ಯುವಕ ತಡರಾತ್ರಿ ದೂರು ನೀಡಿದ್ದಾನೆ.
ಕಾರ್ಪೊರೇಟರ್ ಚೇತನ್ ಹಿರೇಕೆರೂರು, ರೋಹಿತ್ ಹಿರೇಕೆರೂರು, ಸಹದೇವ @ಗುಂಡು ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ರಾತ್ರಿ ಪಬ್‌ನಲ್ಲಿ ಸಂತ್ರಸ್ತ ರಾಹುಲ್ ಸ್ನೇಹಿತರ ಜೊತೆ ಐಸ್ ಕ್ಯೂಬ್‌ಗೆ ಬಂದಿದ್ದ. ಇದೇ ವೇಳೆ ರೋಹಿತ್ ಹಾಗೂ ಸಹದೇವ ಕೂಡ ಅಲ್ಲಿದ್ದರು ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ನಂತರ ಚೇತನ್ ಖುದ್ದು ಪಬ್‌ಗೆ ಬಂದು ರಾಹುಲ್ ತಲೆಗೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಪೊಲೀಸರು ಕೇವಲ 3 ತಿಂಗಳ ಅವಧಿಯಲ್ಲೇ ಎರಡನೇ ಬಾರಿಗೆ ರೌಡಿ ಕಾರ್ಪೊರೇಟರ್‌ನನ್ನು ಬಂಧಿಸಿದ್ದು, ಜನಪ್ರತಿನಿಧಿ ಆಗಿದ್ದರು. ತನ್ನ ಜವಾಬ್ದಾರಿ ಮರೆತು ಹೊಡೆದಾಡಿಕೊಂಡ ಚೇತನ್ ಬಗ್ಗೆ ನಾಗರಿಕರು ಕೂಡ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲಿ ನೈಟ್‌ಲೈಫ್ ಸಂಸ್ಕೃತಿ ಕೂಡ ಮೆಲ್ಲಗೆ ಹರಡುತ್ತಿದ್ದು, ಪಬ್ ಕ್ಲಬ್‌ಗಳಲ್ಲಿ ಗಲಾಟೆ ಕಾಮನ್ ಆಗಿ ನಡೆಯುತ್ತಲೇ ಇವೆ. ಇವೆಲ್ಲವನ್ನೂ ಅವಳಿ ನಗರ ಪೊಲೀಸರು ಹೇಗೆ ಕಂಟ್ರೋಲ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ