ಬಳ್ಳಾರಿ: ನಾನು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ರಸ್ತೆಯಲ್ಲಿ ಒಬ್ಬ ಹುಡುಗ ಹುಲಿಯ ಚಿತ್ರ ತೋರಿಸಿ ನನ್ನನ್ನು ಹುಲಿ ಎಂದು ಅಭಿಮಾನದಿಂದ ಕರೆದ, ನಿಜವಾಗಿಯೂ ಹುಲಿ ಬೇಟೆಯಾಡಲು ಒಮ್ಮೆ ಸಿದ್ಧವಾದರೆ ಬೇಟೆ ಆಡಿಯೇ ತೀರುತ್ತದೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಗುಡುಗಿದ್ದಾರೆ.
ಬಳ್ಳಾರಿ ನಗರದ 25ನೇ ವಾರ್ಡ್ನಲ್ಲಿ ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು ಅವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಹುಲಿ ಹಸಿವಾದಾಗ ಆಹಾರ ಎಷ್ಟು ಬೇಕೋ ಅಷ್ಟು ಸೇವಿಸುತ್ತದೆ, ಆಹಾರಕ್ಕಾಗಿ ಅದು ಬೇಟೆಯಾಡುತ್ತದೆ, ಹಸಿವಾದಾಗ ಅದು ಬಂದು ಬೇಟೆಯಾಡುತ್ತದೆ, ನಮ್ಮ ರಕ್ತ ಕೂಡ ಅಂತಹದ್ದು, ನಮ್ಮ ತಂದೆ ಪೊಲೀಸ್ ಪೇದೆ ಆಗಿ ಕೆಲಸ ಮಾಡಿರಬಹುದು, ಆದರೆ ನನ್ನ ತಾತಂದಿರು ರಾಜರಂತೆ ಬದುಕಿದವರು, ಅವರ ರಕ್ತ ನನ್ನಲ್ಲಿದೆ, ಅದನ್ನು ಬದಲಿಸಲಾಗದು ಎಂದು ಭಾಷಣದುದ್ದಕ್ಕೂ ಆರ್ಭಟದ ಮಾತುಗಳನ್ನ ಆಡಿದರು.
ಕಳೆದ 12 ವರ್ಷಗಳಿಂದ ನಾನು ಸುಮ್ಮನೇ ಇದ್ದೇನೆ ಎಂದರೆ ನನ್ನ ಕೈಯಿಂದ ಏನೂ ಆಗುವುದಿಲ್ಲ ಎಂದರ್ಥವಲ್ಲ, ನಾನು ಒಂದೂವರೆ ವರ್ಷದಿಂದ ಮನೆಯಲ್ಲಿದ್ದೆ. ಮನೆಯಿಂದ ಹೊರ ಬಂದರೆ ಕೆಲವರು ತಲೆ ಕೆಡಿಸಿಕೊಂಡು ಆಗುವ ಕೆಲಸವೂ ಆಗುವುದಿಲ್ಲ ಎಂದು ನಾನು ಸುಮ್ಮನಿದ್ದೆ ಎಂದು ಅವರು ಹೇಳಿದರು.
ಕಾಂಗ್ರೆಸ್, ಬಿಜೆಪಿ ಅಂತ ನಾನು ಹೇಳುವುದಿಲ್ಲ, ನಮ್ಮ ಕುಟುಂಬ ಬಳ್ಳಾರಿಯ ಅಭಿವೃದ್ಧಿಗೆ ಬದ್ಧವಾಗಿದೆ, ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದ ರೆಡ್ಡಿ, ನಾನು ಬೆಂಗಳೂರಿನಲ್ಲೇ ಐಷಾರಾಮಿ ಬದುಕು ನಡೆಸಬಹುದು, ಆದರೆ ನನಗೆ ನನ್ನ ಬಳ್ಳಾರಿ ಮುಖ್ಯ, ಜನಾರ್ಧನ ರೆಡ್ಡಿ ಎಂದರೆ ಹೆಲಿಕಾಪ್ಟರ್ ತೋರಿಸುತ್ತಾರೆ, ನಾನು ಸಚಿವನಾಗಿದ್ದಾಗ ಬಳ್ಳಾರಿ ಬೆಂಗಳೂರು ಪ್ರಯಾಣಕ್ಕೆ ದಾರಿ ಮೂಲಕ ತೆರಳಿದರೆ ಹೆಚ್ಚು ಸಮಯ ಖರ್ಚಾಗುತ್ತದೆ, ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹೋದರೆ ಸಮಯ ಉಳಿಯುತ್ತದೆ, ಉಳಿದ ಸಮಯದಲ್ಲಿ ಜನರ ಕೆಲಸ ಮಾಡಬಹುದೆಂದು, ಜನರ ನಡುವೆ ಬೆರೆಯಬಹುದೆಂದು ನಾನು ಸಚಿವನಾಗಿದ್ದಾಗ ಹೆಲಿಕಾಪ್ಟರ್ ಖರೀದಿಸಿದೆ ವಿನಃ ಶೋಕಿಗಾಗಿ ಅಲ್ಲ. 12 ವರ್ಷಗಳ ನಂತರ ಮಗನಿಗಾಗಿ ಬೆಂಗಳೂರಿನಲ್ಲಿ ಒಂದು ಮನೆ ಕಟ್ಟುತ್ತಿರುವೆ ಎಂದು ತಿಳಿಸಿದರು.