ನವದೆಹಲಿ : ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಜನರು ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೆಹಲಿಯಲ್ಲಿ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ಮಾಲಿನ್ಯ ಸಹಜ ಸ್ಥಿತಿಗೆ ಬರುವವರೆಗೆ ಶಾಲೆಗಳಿಗೆ ರಜೆ ಮುಂದುವರಿಯಲಿದೆ.
ಮಾಲಿನ್ಯ ಪರಿಸ್ಥಿತಿ ಸುಧಾರಿಸುವವರೆಗೆ ದೆಹಲಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮಾಲಿನ್ಯ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಸರತ್ತು ಮಾಡ್ತಿದೆ. 5 ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗುತ್ತದೆ..
ವಾಹನಗಳಿಗೆ ಬೆಸ-ಸಮ ಯೋಜನೆಯನ್ನು ಜಾರಿಗೊಳಿಸಬೇಕೆ ಎಂದು ಯೋಚಿಸುತ್ತಿದ್ದೇವೆ. ಇದು ಆಪಾದನೆ ಮಾಡುತ್ತಾ ಕೂರುವ, ಬೇರೆಯವರ ಮೇಲೆ ಬೆರಳು ತೋರಿಸುವ ಸಮಯವಲ್ಲ. ರಾಜಕೀಯ ಮಾಡುತ್ತಾ ಕಾಲಹರಣ ಮಾಡುವುದು ಬೇಡ, ಉತ್ತರ ಭಾರತವನ್ನು ಮಾಲಿನ್ಯ ಸಮಸ್ಯೆಯಿಂದ ರಕ್ಷಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜೊತೆಗೆ, ಪಂಜಾಬ್ ರಾಜ್ಯದಲ್ಲಿ ಪೈರಿನ ಕೂಳೆ ಸುಡುವಿಕೆಯಿಂದ ಇಷ್ಟೊಂದು ಮಾಲಿನ್ಯ ಹೆಚ್ಚಾಗಿದೆ. ಇದಕ್ಕೆ ಹಿಂದಿನ ಸರ್ಕಾರದ ನೀತಿಯೇ ಕಾರಣ. ಇದನ್ನು ಮುಂದಿನ ವರ್ಷದಿಂದ ಗಣನೀಯ ಪ್ರಮಾಣದಲ್ಲಿ ತಗ್ಗಿಸಲಾಗುವುದು ಸಿಎಂ ಅರವಿಂದ್ ಕೇಜ್ರಿವಾಲ್ ಹಾಗು ಪಂಜಾಬ್ ಸಿಎಂ ಭಗವಂತ್ ಮಾನ್ ಜಂಟಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ, ದೆಹಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಕೊಂಡಿದೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ ಅಂತಿಮ ಹಂತದ ಅಡಿಯಲ್ಲಿ ಮಾಲಿನ್ಯಕಾರಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳ ಅನುಷ್ಠಾನದ ಕುರಿತು ಚರ್ಚಿಸಲು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ರು.
ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ದೆಹಲಿ ಸರ್ಕಾರಕ್ಕೆ ಸೂಚಿಸಿತ್ತು. ದೆಹಲಿಯಲ್ಲಿ ತಾಪಮಾನ 16.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 426 ರಷ್ಟಿದೆ. ದೆಹಲಿಯ ಆನಂದ್ ವಿಹಾರ್ ಮತ್ತು ಜಹಾಂಗೀರ್ಪುರಿ ರಾಜಧಾನಿಯಲ್ಲಿ ಅತ್ಯಂತ ಕಲುಷಿತ ಸ್ಥಳಗಳಾಗಿವೆ. ಇಷ್ಟೇ ಹತ್ತಾರು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400ಕ್ಕೂ ಹೆಚ್ಚು ಇದೆ… 400 ಕ್ಕಿಂತ ಹೆಚ್ಚಿನ AQI ಅನ್ನು ತೀವ್ರವೆಂದು ಪರಿಗಣಿಸಲಾಗುತ್ತದೆ ಇದು ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.