ರಾಮನಗರ : ಜಿಲ್ಲೆ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮಾಗಡಿ ಪೊಲೀಸರು ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಎ1 ಆರೋಪಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಎ2 ನೀಲಾಂಬಿಕೆ ಎ3 ವಕೀಲ ಮಹದೇವಯ್ಯರನ್ನು ಕಳೆದ ಮೂರು ದಿನಗಳಿಂದ ಫುಲ್ ಗ್ರಿಲ್ ಮಾಡಿದ್ದಾರೆ. ಇನ್ನೂ ಇದೇ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಮೃತ್ಯುಂಜಯ ಶ್ರೀಗಳು ವಿಡಿಯೋ ಮಾಡಿದ್ದು ತಪ್ಪಾಯಿತು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮಾಗಡಿ ಠಾಣೆ ಇನ್ಸ್‌ಪೆಕ್ಟರ್ ರವಿ ನೇತೃತ್ವದಲ್ಲಿ ಕಣ್ಣೂರು ಮಠ ಹಾಗೂ ಸಿದ್ದಗಂಗಾ ಮಠದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇನ್ನೂ ಮದನಾರಿ ನೀಲಾಂಬಿಕೆಯ ಮೊಬೈಲ್ ಜ್ಞಾನಕ್ಕೆ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಬಂಡೆಮಠದ ಸ್ವಾಮೀಜಿ ಅಕ್ಟೋಬರ್ 24ರಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ರು. ಇಂದಿಗೆ 11ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಸ್ವಾಮೀಜಿಗಳ 11 ನೇ ದಿನದ ಶಿವಗಣಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು.ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇನ್ನೂ ಇದೇ ವೇಳೆ ಮಾತನಾಡಿದ ಸಿದ್ದಗಂಗಾ ಶ್ರೀಗಳು, ಸ್ವಾಮೀಜಿಯ ಹನ್ನೊಂದನೇ ದಿನ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಆಚಾರ ವಿಚಾರದಂತೆ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರಕರಣದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಘಟನೆ ಬಗ್ಗೆ ಮೊದಲೇ ಗೊತ್ತಿರಲಿಲ್ಲ. ಗೊತ್ತಿದ್ದರೆ ನನ್ನ ಬಳಿ ಸ್ವಾಮೀಜಿ ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದರು.
ಒಟ್ಟಾರೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಪ್ರವೀಣ್ ಎಂ.ಹೆಚ್.ಪವರ್ ಟಿವಿ ರಾಮನಗರ