ಕಾರವಾರ : ರಾಜ್ಯದಲ್ಲಿ ಕಬ್ಬುಬೆಳೆಗಾರರು ಸರ್ಕಾರದ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.ಧಾರವಾಡ ಬೆನ್ನಲ್ಲೇ ಉತ್ತರಕನ್ನಡದ ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿದ್ದಾರೆ.ಸಕ್ಕರೆ ಕಾರ್ಖಾನೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ 38ನೇ ದಿನಕ್ಕೆ ಕಾಲಿಟ್ಟಿದ್ದು, ಆರು ದಿನಗಳಿಂದ ನಿರಂತರವಾಗಿ ರೈತರು ಉಪವಾಸ ಸತ್ಯಾಗ್ರಹ ನಡೆಸ್ತಿದ್ದಾರೆ. ಆದರೆ, ಸರ್ಕಾರ ರೈತರ ಸಮಸ್ಯೆ ಬಗೆಹರಿಸೋದನ್ನು ಬಿಟ್ಟು, ಬೇರೆ ಕಡೆಗಳಿಂದ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಮುಂದಾಗಿದೆ. ಇದ್ರಿಂದ ಕೆರಳಿದ ಕೃಷಿಕರು ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ತಡೆದು ಅದರ ಗಾಜನ್ನು ಪುಡಿಪುಡಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಕಳೆದ ವರ್ಷ ಸರ್ಕಾರ ಪ್ರತಿ ಟನ್ ಕಬ್ಬಿಗೆ 2,592 ರೂಪಾಯಿ ದರ ನಿಗದಿ ಮಾಡಿತ್ತು. ಆದ್ರೆ, ಈ ವರ್ಷ ಕಳೆದ ವರ್ಷಕ್ಕಿಂತ 271 ರೂಪಾಯಿ ಕಡಿಮೆ ನೀಡಿದೆ. ಅಲ್ಲದೆ, ಹೆಚ್ಚುವರಿಯಾಗಿ 305 ರೂಪಾಯಿ ಸಾಗಾಟ ವೆಚ್ಚ ನೀಡುವುದಾಗಿ ಹೇಳಿತ್ತು. ಆದರೆ, ಇದ್ಯಾವುದನ್ನೂ ನೀಡಿಲ್ಲ.ಸಾಲ್ದೂ ಎಂಬಂತೆ ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದಿದೆ. 38 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಅನೇಕ ರೈತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಟ್ಟಾರೆ ತಿಂಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟ ಇದೀಗ ಮತಷ್ಟು ತಾರಕ್ಕೇರುತ್ತಿದ್ದು, ಇದೇ 9ರಂದು ಹಳಿಯಾಳಕ್ಕೆ ಆಗಮಿಸಲಿರುವ ಸಿಎಂ ಬೊಮ್ಮಾಯಿಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ.
ಉದಯ್ ಬರ್ಗಿ ಪವರ್ ಟಿವಿ ಕಾರವಾರ