ಅವತಾರ್. ಅದೊಂದು ಅದ್ಭುತ ಜಗತ್ತು. ಸಿಲ್ವರ್ ಸ್ಕ್ರೀನ್ ಮೇಲೆ ನಯನ ಮನೋಹರವಾದ ಪ್ರಪಂಚ ಸೃಷ್ಠಿಸಿ ಪ್ರೇಕ್ಷಕರ ಕಣ್ಮನ ತಣಿಸಿದ್ದ ನಿರ್ದೆಶಕ ಜೇಮ್ಸ್ ಕ್ಯಾಮರೂನ್. ಅವತಾರ್ 2 ಚಿತ್ರಕ್ಕೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆದ್ರೆ, ಜೇಮ್ಸ್ ಕ್ಯಾಮರೂನ್ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಅನ್ನೋ ಹಾಗೆ ಮಾಡಿದ್ದಾರೆ. ಯೆಸ್.. ಏನಿದು ಪಕ್ಷಪಾತ ಅಂತೀರಾ..? ನೀವೇ ಓದಿ.
- ಕನ್ನಡ ಹಬ್ಬಕ್ಕಿಲ್ಲ ಗುಡ್ ನ್ಯೂಸ್.. ಪರಭಾಷೆಗಳದ್ದೇ ದರ್ಬಾರ್
ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಅವತಾರ್ ಸಿನಿಮಾವನ್ನು ಚಿತ್ರೀಕರಿಸಲಾಗಿತ್ತು. ತೆರೆಯ ಮೇಲೆ ಸಿನಿಮಾ ನೋಡಿ ಮಂತ್ರಮುಗ್ಧವಾಗಿದ್ದರು. ಅಚ್ಚರಿ, ವಿಸ್ಮಯ ಲೋಕದೊಳಗೆ ಕಾಡಿನ ಸೌಂದರ್ಯ ಕಂಡು ಮೂಖವಿಸ್ಮಿತರಾಗಿದ್ದರು. 2009 ರಲ್ಲಿ ರಿಲೀಸ್ ಆಗಿದ್ದ ಅವತಾರ್ ಚಾಪ್ಟರ್ 1 ಬಾಕ್ಸ್ ಆಫೀಸ್ ಕಲೆಕ್ಷನ್ ಉಡೀಸ್ ಮಾಡಿತ್ತು. ಇದೀಗ 13 ವರ್ಷಗಳ ನಂತ್ರ ಅವತಾರ್ 2 ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ.
ಜೇಮ್ಸ್ ಕ್ಯಾಮರೂನ್ ಇಮ್ಯಾಜಿನೇಷನ್ನಲ್ಲಿ ಅವತಾರ್ 2 ಸಂಚಲನ ಮೂಡಿಸಲಿದೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ತಿದ್ದ ಚಿತ್ರಪ್ರೇಮಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಒಟ್ಟು ಐದು ಭಾಷೆಗಳಲ್ಲಿ ಅವತಾರ್ ಸಿನಿಮಾ ರಂಜಿಸಲಿದೆ. ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಆದ್ರೆ, ಕನ್ನಡ ಹಬ್ಬದ ಖುಷಿಯಲ್ಲಿರೋ ಕನ್ನಡಾಭಿಮಾನಿಗಳಿಗೆ ಅವತಾರ್ ಚಿತ್ರತಂಡ ನಿರಾಸೆ ಮೂಡಿಸಿದೆ.
ದೃಶ್ಯವೈಭವವನ್ನು ಕಣ್ತುಂಬಿಕೊಳ್ಳುವ ಜೊತೆಗೆ ಕಥೆಯ ಜೊತೆಗೆ ಬೆರೆಯಬೇಕಾದರೆ ಭಾಷೆ ಅವಶ್ಯಕ. ಯ್ಯೂನಿವರ್ಸಲ್ ಬ್ಲಾಕ್ ಬಸ್ಟರ್ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗದಿದ್ರೆ, ಅನೇಕ ಚಿತ್ರಪ್ರೇಮಿಗಳಿಗೆ ಅನ್ಯಾಯವಾಗುತ್ತದೆ. ಕನ್ನಡ ಮಾತ್ರ ಬಲ್ಲ ಚಿತ್ರರಸಿಕರಿಗೆ ನಿರಾಸೆಯಾಗುತ್ತದೆ. ಸದ್ಯ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಕಮಾಲ್ ಮಾಡ್ತಿರೋವಾಗ ಅವತಾರ್ ಸಿನಿಮಾ ಪರಭಾಷೆಗಳಿಗೆ ಮಾತ್ರ ಮನ್ನಣೆ ನೀಡಿದ್ದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ.
ಅವತಾರ್ 2 ಚಿತ್ರಕ್ಕೆ ದಿ ವೇ ಆಫ್ ವಾಟರ್ ಎಂಬ ಕ್ಯಾಪ್ಷನ್ ಕೊಡಲಾಗಿದೆ. ಡಿಸೆಂಬರ್ 16ಕ್ಕೆ 3ಡಿ ವರ್ಷನ್ನಲ್ಲಿ ಹೊಸ ಪ್ರಪಂಚದ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದೆ. ‘ಅವತಾರ್ 3’ 2024ರ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ. ‘ಅವತಾರ್ 4’ ಡಿಸೆಂಬರ್ 18, 2026ರಂದು ರಿಲೀಸ್ ಆಗುತ್ತಿದೆ. ‘ಅವತಾರ್ 5’ 2028ರ ಡಿಸೆಂಬರ್ 22ರಂದು ಬಿಡುಗಡೆ ಆಗುತ್ತಿದೆ. ಏನೇ ಇರಲಿ, ಕನ್ನಡಕ್ಕೂ ಅವತಾರ್ ಸಿನಿಮಾ ಡಬ್ ಆಗಲಿ ಎಂಬುದೇ ನಮ್ಮೆಲ್ಲರ ಆಶಯ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ