ಉಡುಪಿ; ಮಲ್ಪೆ ಬಂದರಿನಲ್ಲಿ ಮೀನು ಕಾರ್ಮಿಕರಾಗಿ ದುಡಿಯುತ್ತಿದ್ದ 16 ಮಂದಿ ಅಪ್ರಾಪ್ತ ಮಕ್ಕಳನ್ನು ಇಂದು ರಕ್ಷಣೆ ಮಾಡಲಾಗಿದೆ.
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಸೇರಿದಂತೆ ವಿವಿಧ ಸಂಸ್ಥೆಗಳು ಜಂಟಿಯಾಗಿ ನಸುಕಿನ 4.30ರ ವೇಳೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದು ಮೀನು ಆಯುವ ಮಕ್ಕಳನ್ನು ಪತ್ತೆ ಮಾಡಿದ್ದಾರೆ.
ಕೊಪ್ಪಳ ಮತ್ತು ದಾವಣಗೆರೆ ಮೂಲದ 11 ಬಾಲಕಿಯರು, 5 ಬಾಲಕರು ಸೇರಿ 16 ಮೀನು ಆಯುವ ಮಕ್ಕಳನ್ನು ರಕ್ಷಿಸಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೊ ಮತ್ತು ಸದಸ್ಯರು ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಿದ್ದಾರೆ.