ಬೆಂಗಳೂರು : ಶಕ್ತಿಕೇಂದ್ರ ವಿಧಾನಸೌಧಕ್ಕೆ ಭಾವನಾತ್ಮಕವಾಗಿ ಕಳೆ ಕಟ್ಟಿತ್ತು.. ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮದ ವೇದಿಕೆಗೆ ಅತಿಥಿಗಳು ಆಗಮಿಸುತ್ತಿದ್ದಂತೆ, ವರುಣನೂ ತಣ್ಣನೆಯ ಸಿಂಚನ ಸುರಿಸಿದ್ದ. ಮಳೆ ಬಂದ್ರೂ ಅಭಿಮಾನಿ ದೇವರುಗಳು ಸ್ಥಳ ಬಿಟ್ಟು ಕದಲಲಿಲ್ಲ.
ಒಂದ್ಕೆಡೆ, ರಾಜ್ಯಾದ್ಯಂತ ಕನ್ನಡರಾಜ್ಯೋತ್ಸವದ ಕಳೆ ಕಟ್ಟಿದ್ರೆ, ಇತ್ತ, ವಿಧಾಸೌಧದ ಮೆಟ್ಟಿಲುಗಳ ಮೇಲೆ ಅಪ್ಪುವಿನ ಗುಣಗಾನ ನಡೆದಿತ್ತು.. ವೇದಿಕೆ ಮೇಲೆ ತಲೈವಾ ರಜನಿಕಾಂತ್, ಜೂನಿಯರ್ ಎನ್‌ಟಿಆರ್, ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ರು.
ಹೌದು, ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರಕಾರ ಪ್ರದಾನ ಮಾಡಲಾಯ್ತು. ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದ್ದು, ಈವರೆಗೂ ಕರ್ನಾಟಕದಲ್ಲಿ ಎಂಟು ಜನರಿಗೆ ನೀಡಲಾಗಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ 9ನೇ ರತ್ನ ಪುನೀತ್ ರಾಜ್ ಕುಮಾರ್ ಎನ್ನುವುದು ವಿಶೇಷ. ಅಲ್ಲದೇ ಮರಣೋತ್ತರ ಪ್ರಶಸ್ತಿ ಪಡೆಯುತ್ತಿರುವ ಮೊದಲ ರತ್ನ ಇವರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಪಡೆದ್ರು.
ಈ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ರು. ಅಪ್ಪು ಮಾಡಿದ ಚಲಚಿತ್ರ 100 ದಿನದ ಕಾರ್ಯಕ್ರಮಕ್ಕೆ ಬಂದಿದ್ದ ರಜನಿಕಾಂತ್ ಪ್ರಶಸ್ತಿ ನೀಡಿ ಗೌರವಿಸಿದ್ರು. ಆ ದಿನ, ರಾಜ್‌ಕುಮಾರ್ ಹೇಗೆ ಕರೆದಿದ್ರು.. ಅಪ್ಪು ಬಗ್ಗೆ ಆಡಿದ ಮಾತುಗಳನ್ನು ರಜನಿಕಾಂತ್ ನೆನಪು ಮಾಡಿಕೊಂಡ್ರು.
ಮಳೆ ಬಂತು ಅಂತ ಬೇಗನೇ ಮಾತು ಮುಗಿಸಿದ್ದ ತಲೈವಾಗೆ ಮಳೆ ಮತ್ತೆ ಮಾತನಾಡಲು ಅನುವು ಮಾಡಿಕೊಡ್ತು.. ಮತ್ತೆ ಮೈಕ್ ಕೈಗೆ ತಗೆದುಕೊಂಡ ತಲೈವಾ, ಶಬರಿಮಲೆಗೆ ಬಂದಿದ್ದ ದೇವರ ಮಗುವಿನ ಬಗ್ಗೆ ಭಾವುಕರಾಗಿ ಮಾತಾಡಿದ್ರು.. ಅವರ ಮಾತು ಕೇಳ್ತಿದ್ದ ಜನ ಮೂಕರಾಗಿ ಕೇಳಿಸಿಕೊಂಡದ್ದು ವಿಶೇಷವಾಗಿತ್ತು.
ಇನ್ನು, ಗೆಳೆಯಾ ಗೆಳೆಯಾ ಎಂದು ಹಾಡಿ, ಗೆಳೆತನವನ್ನು ಮತ್ತಷ್ಟು ಗಟ್ಟಿಮಾಡಿಕೊಂಡಿದ್ದ ಜೂನಿಯರ್ ಎನ್‌ಟಿಆರ್ ಕನ್ನಡ ಮಾತು ಮತ್ತೊಂದು ಲೆವೆಲ್‌ಗೆ ತಗೆದುಕೊಂಡು ಹೋಯ್ತು.. ಅವರ ಕನ್ನಡ ಮಾತುಗಳಲ್ಲಿ ಅಪ್ಪುವನ ಸ್ನೇಹ ಎಂತಹದೆಂದು ಗೊತ್ತು ಮಾಡುವಂತಿತ್ತು.
ಅಪ್ಪು ನಮ್ಮೊಂದಿಗಿದ್ದಾನೆ. ಅಮರಾರಾಗಿದ್ದಾನೆ. ಇವತ್ತು ಕರ್ನಾಟಕ ರತ್ನನಾಗಿ, ಆಕಾಶದಿಂದ ಶುಭಕೋರಿದ್ದಾನೆ ಎಂದು ಮಳೆಯಲ್ಲೇ ನೆನೆಯುತ್ತಲೇ ಮಾತನಾಡಿದ್ರು ಸಿಎಂ ಬಸವರಾಜ ಬೊಮ್ಮಾಯಿ.
ಒಟ್ನಲ್ಲಿ, ಗಂಧದಗುಡಿಯ ಸರದಾರ, ಕರುನಾಡಿನ ಅಭಿಮಾನಿಗಳ ಪಾಲಿನ ಪರಮಾತ್ಮ. ಕೆಚ್ಚೆದೆಯ ವೀರಕನ್ನಡಿಗ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿಲ್ಲ ಅನ್ನೋ ಭಾವನೆ ಬಾರದ ರೀತಿಯಲ್ಲಿ ಕಾರ್ಯಕ್ರಮಗಳು ನಡೆದಿವೆ.
ರಾಜರತ್ನ ಈಗ ಕರ್ನಾಟಕ ರತ್ನನಾಗುವ ಮೂಲಕ ಪುನೀತ್ ರಾಜ್‌ಕುಮಾರ್ ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ಉಳಿದು ಬಿಟ್ಟಿದ್ದಾರೆ.