Friday, December 27, 2024

ಉತ್ತರಕನ್ನಡದಲ್ಲಿದೆ ಭುವನೇಶ್ವರಿ ದೇಗುಲ

ಕಾರವಾರ : ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಭುವನೇಶ್ವರಿ ದೇವಿ ನೆಲೆಸಿದ್ದಾಳೆ.ನಾಡಿಗೊಂದು ಅಧಿದೇವತೆ, ಭಾಷೆಗೊಂದು ಸುಂದರ ಲಾಂಛನವನ್ನು ಹೊಂದಿರುವ ಅಪರೂಪದ ಭಾಷೆ ನಮ್ಮ ಕನ್ನಡ. ಕನ್ನಡ ಭಾಷೆಯ ನೆಲ, ಜಲ, ನುಡಿಗಾಗಿ ಕದಂಬರ ಅರಸ ವೀರ ಮಯೂರನಿಂದಾಗಿ ಸ್ವಾಭಿಮಾನಿ ರಾಜ್ಯ ನಿರ್ಮಾಣವಾದ ಅಪರೂಪದ ಇತಿಹಾಸ ನಮ್ಮ ನಾಡಿನದ್ದು. ಇಂತಹ ಹೆಮ್ಮೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ ನಿಂತಿದೆ ಉತ್ತರಕನ್ನಡ ಜಿಲ್ಲೆ. ಇಂದಿಗೂ ಈ ನೆಲ ಕನ್ನಡದ ಕುಲದೇವಿಯನ್ನ ಮಡಿಲಲ್ಲಿಟ್ಟುಕೊಂಡಿದೆ. ಅಪ್ಪಟ ಮಲೆನಾಡ ಹಸಿರು ಸೊಬಗಿನ ನಡುವೆ ಕನ್ನಡಿಗರೊಡತಿ ತಾಯಿ ಭುವನೇಶ್ವರಿ ದೇವಿ ನೆಲೆ ನಿಂತಿದ್ದಾಳೆ. ದಟ್ಟ ಹಸಿರು ಬೆಟ್ಟದ ಮೇಲೆ ಕುಳಿತು ಕನ್ನಡಿಗರನ್ನು ಹರಸುತ್ತಿದ್ದಾಳೆ.

ಇನ್ನೂ ಮೂರು ಶತಮಾನಗಳಿಗೂ ಮೊದಲೇ ಬಿಳಗಿಯ ಅರಸರು ತಾಯಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣದ ಮೂಲಕ ಕನ್ನಡತಿಯ ತೇರನ್ನು ಎಳೆದಿದ್ದರು. ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವನ್ನು ಕಾಣಬಹುದಾಗಿದೆ. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಹದಿನೇಳನೆಯ ಶತಮಾನದವರೆಗಿನ ದಾಖಲೆಗಳು ಲಭ್ಯವಿಲ್ಲ. ಮದ್ರಾಸ್ ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಎನ್ನಲಾಗಿದೆ.

ಕನ್ನಡದ ಮೊದಲ ಅರಸರಾದ ಕದಂಬರು ಈ ದೇವಿಯನ್ನು ಆರಾಧಿಸಿದ್ದರೆಂಬುದಕ್ಕೆ ಭುವನಗಿರಿ ಭುವನೇಶ್ವರಿ ದೇವಿಯ ದೇವಾಲಯಗಳೇ ಸಾಕ್ಷಿ. ಅದಕ್ಕಾಗಿಯೇ ಆಕೆಯನ್ನು ಕನ್ನಡದ ಕುಲದೇವಿ ಎಂದು ಕರೆದು ಗೌರವಿಸಲಾಗುತ್ತಿದೆ. ಕನ್ನಡ ನಾಡು, ನುಡಿಯ ಸಂಕೇತವಾದ ಭುವನಗಿರಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ಪ್ರತಿಯೊಬ್ಬ ಕನ್ನಡಿಗ ಪಣ ತೊಡಬೇಕಾಗಿದೆ.

ಉದಯ್ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES