ದಾಳಿಗೆ ಹೆದರದ ಡಾಲಿ, ರಾಜ್ಯೋತ್ಸವ ಸಂಭ್ರಮದಲ್ಲಿ ವಿಜಯೋತ್ಸವದಲ್ಲಿದ್ದಾರೆ. ಯೆಸ್.. ಕಾಂಟ್ರವರ್ಸಿ ಮಾಡಿ ಕಾಲೆಳೆಯೋ ಮೂಲಕ ಹೆಡ್ಬುಷ್ಗೆ ತೊಂದರೆ ಆಯ್ತು ಅಂದ್ಕೊಂಡಿದ್ದೋರಿಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಉತ್ತರ ಕೊಟ್ಟಿದ್ದಾರೆ ಧನಂಜಯ. ಟೀಕೆ ಟಿಪ್ಪಣಿಗಳ ಮಧ್ಯೆ ಗಟ್ಟಿಯಾಗಿ ನೆಲೆನಿಂತ ಸಿನಿಮಾದ ರೋಚಕ ಕಥೆ ನಿಮಗಾಗಿ.
- ದಾಳಿಗೆ ಹೆದರದ ಡಾಲಿ.. ಫಸ್ಟ್ ವೀಕ್ ಕಲೆಕ್ಷನ್ 12 ಕೋಟಿ..!
- ಪ್ಯಾನ್ ಇಂಡಿಯಾ ಅಬ್ಬರಿಸುತ್ತಿರೋ ಅಪ್ಪಟ ಕನ್ನಡ ಪ್ರತಿಭೆ
- ಪರಭಾಷಾ ಸ್ಟಾರ್ಸ್ ಮೆಚ್ಚಿದ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್
ಯಾವುದೇ ಬ್ಯಾಗ್ರೌಂಡ್, ಗಾಡ್ ಫಾದರ್ ಇಲ್ಲದೆ ಸ್ವಂತ ಪ್ರತಿಭೆಯಿಂದ ಬಣ್ಣದಲೋಕದಲ್ಲಿ ನೆಲೆ ಕಂಡುಕೊಂಡ ಕಲಾವಿದ. ನಾಯಕನಟನಾಗಿ ಕೈಹಿಡಿಯದ ಸಾಲು ಸಾಲು ಸಿನಿಮಾಗಳ ನಂತ್ರ ಶಿವಣ್ಣನ ಟಗರು ಚಿತ್ರದ ಡಾಲಿ ಪಾತ್ರದಿಂದ ಎಲ್ಲರ ಹೃದಯಗಳಿಗೆ ದಾಳಿಯಿಟ್ಟ ನಟರಾಕ್ಷಸ.
ನಾಯಕ, ಖಳನಾಯಕ ಅನ್ನದೆ ಪಾಲಿಗೆ ಬಂದ ಪಾತ್ರಕ್ಕೆ ಜೀವ ತುಂಬೋ ಮೂಲಕ ಕೋಟ್ಯಂತರ ಸಿನಿರಸಿಕರನ್ನ ರಂಜಿಸ್ತಿರೋ ಡಾಲಿ, ಕನ್ನಡದ ಜೊತೆ ತೆಲುಗು, ಮಲಯಾಳಂ, ತಮಿಳು, ಹಿಂದಿಯಲ್ಲೂ ಛಾಪು ಮೂಡಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಮೂಲಕ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.
ಅಲ್ಲದೆ, ನಟನೆಯ ಜೊತೆ ಸಿನಿಮಾ ನಿರ್ಮಾಣದಲ್ಲೂ ಶಹಬ್ಬಾಸ್ ಅನಿಸಿಕೊಂಡಿರೋ ಧನಂಜಯ ಬಡವ ರಾಸ್ಕಲ್ ಬಳಿಕ ಹೆಡ್ಬುಷ್ನಲ್ಲೂ ಸಕ್ಸಸ್ ಕಂಡಿದ್ದಾರೆ. ಅಗ್ನಿ ಶ್ರೀಧರ್ ಬರಹದ, ಶೂನ್ಯ ನಿರ್ದೇಶನದ ಹೆಡ್ಬುಷ್ ಚಿತ್ರ ಡಾನ್ ಜಯರಾಜ್ ಕುರಿತ ಬಯೋಪಿಕ್ ಆಗಿದ್ದು, ನೈಜ ಘಟನೆ ಆಧಾರಿತ ರಕ್ತಸಿಕ್ತ ಕಥಾನಕ ಎಲ್ಲರ ಮನ ಮುಟ್ಟಿದೆ.
ವೀರಗಾಸೆ, ಕರಗದ ಸೀಕ್ವೆನ್ಸ್ ವಿಚಾರ ವಿವಾದಗಳ ಸುಳಿಯಲ್ಲಿ ಸಿಲುಕಿದ ಡಾಲಿ ಮೇಲೆ ಸಾಕಷ್ಟು ಮಂದಿ ತರಹೇವಾರಿಯಲ್ಲಿ ದಾಳಿ ಮಾಡಿದ್ರು. ಆದ್ರೆ ಕಾಲೆಳೆಯೋರಿಗಿಂತ ಅವ್ರ ಕೈ ಹಿಡಿಯೋರ ಸಂಖ್ಯೆಯೇ ಹೆಚ್ಚಾಗಿತ್ತು. ಹಾಗಾಗಿ ಅವ್ರ ಅಸಂಖ್ಯಾತ ಅಭಿಮಾನಿಗಳು, ಕನ್ನಡ ಕಲಾಭಿಮಾನಿಗಳು ಧನಂಜಯ ಸಪೋರ್ಟ್ಗೆ ನಿಂತರು. ಕಾಂತಾರ ಚಿತ್ರದ ಅಬ್ಬರ, ಗಂಧದಗುಡಿ ರಿಲೀಸ್, ಅಪ್ಪು ಪುಣ್ಯ ಸ್ಮರಣೆ ಹೀಗೆ ಸಾಕಷ್ಟು ಹೈಪ್ ಸ್ಟೋರಿಗಳ ಮಧ್ಯೆಯೂ ಹೆಡ್ಬುಷ್ ವಿಜಯ ಸಾಧಿಸಿದೆ.
ಚಿತ್ರ ತೆರೆಕಂಡ ಒಂದೇ ವಾರದಲ್ಲಿ ಬರೋಬ್ಬರಿ 12 ಕೋಟಿ ಬ್ಯುಸಿನೆಸ್ ಮಾಡಿದೆ. ಪ್ರೀ ರಿಲೀಸ್ ಬ್ಯುಸಿನೆಸ್ನಲ್ಲೇ ನಿರ್ಮಾಪಕರಾಗಿ ಸೇಫ್ ಆಗಿದ್ದ ಡಾಲಿ, ಸದ್ಯ ಲಾಭದಲ್ಲಿದ್ದಾರೆ. ಇದು ಅವ್ರ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಗದಷ್ಟು ಚಿತ್ರಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದಾರೆ ಡಾಲಿ. ಒಬ್ಬ ಪ್ರತಿಭಾವಂತ ನಟ, ನಿರ್ಮಾಪಕನನ್ನ ಉಳಿಸಿಕೊಳ್ಳೋದು ನಮ್ಮ ನಿಮ್ಮೆಲ್ಲರ ಕರ್ತವ್ಯವೂ ಹೌದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ