Monday, May 20, 2024

ಕಬ್ಬು ಬೆಳೆಗಾರರಿಗೆ ಕೊಟ್ಟ ಮಾತು ತಪ್ಪಿತಾ ಸರ್ಕಾರ..?

ಕಲಬುರಗಿ : ರಾಜ್ಯದ ಬೊಮ್ಮಾಯಿ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರು ಮತ್ತೆ ಬೀದಿಗಿಳಿದಿದ್ದಾರೆ.ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ MRP ದರ ನಿಗದಿಪಡಿಸುವಂತೆ ಆಗ್ರಹಿಸಿ ಬೆಳೆಗಾರರು ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರ ಟನ್ ಕಬ್ಬಿಗೆ 3150 ರೂ. ಮಾತ್ರ MRP ನಿಗದಿಪಡಿಸಿದ್ದು, ಇದನ್ನು ಖಂಡಿಸಿ ಟನ್ ಕಬ್ಬಿಗೆ 5,500 ರೂಪಾಯಿ ನಿಗದಿ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಕಲಬುರಗಿ ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರೈತರು ಕೈಯಲ್ಲಿ ತಾವು ಬೆಳೆದ ಕಬ್ಬನ್ನ ಹಿಡಿದುಕೊಂಡು ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದ್ರು. ನೂರಾರು ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ರೈತರು ಮುಂದಾದಾಗ ಪೊಲೀಸರು ತಡೆಯಲು ಯತ್ನಿಸಿದ ವೇಳೆ ಪೊಲೀಸರು- ರೈತರ ಮಧ್ಯೆ ನೂಕಾಟ, ತಳ್ಳಾಟ ನಡೆದು ತೀವ್ರ ವಾಗ್ದಾಳಿ ಜರುಗಿತು. ಸುಮಾರು 6 ಗಂಟೆಗೂ ಹೆಚ್ಚು ಕಾಲ ರೈತರು ರಸ್ತೆ ತಡೆ ನಡೆಸಿದ್ರಿಂದ ಸವಾರರು ಪರದಾಡಿದ್ರು.

ಇನ್ನೊಂದೆಡೆ ಬಾಗಲಕೋಟೆಯಲ್ಲೂ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಪ್ರತಿಭಟನೆ ನಡೆಸಿದ್ರು. ಬೃಹತ್​ ಪ್ರತಿಭಟನೆಯಿಂದಾಗಿ ಸುಮಾರು 12 ಕಿಲೋ ಮೀಟರ್ ಟ್ರಾಫಿಕ್‌ ಜಾಮ್ ಉಂಟಾಗಿತ್ತು..

ಒಟ್ಟಾರೆ ಕಬ್ಬು ಬೆಳೆಗಾರರು ಈ ಹಿಂದೆಯೂ ಸರ್ಕಾರದ ವಿರುದ್ಧ ಬೀದಿಗಿಳಿದ್ದರು. ಆದರೆ, ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದರಿಂದ ರೈತರು ಮೆತ್ತಗಾಗಿದ್ದರು. ಆದರೆ ಇದೀಗ ಮತ್ತೆ ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ. ಇದು ಸರ್ಕಾರ ಕೊಟ್ಟ ಮಾತು ತಪ್ಪಿದ್ಯಾ ಎಂಬ ಪ್ರಶ್ನೆಗೆ ಪುಷ್ಠಿ ಕೊಟ್ಟಂತಾಗಿದೆ.

RELATED ARTICLES

Related Articles

TRENDING ARTICLES