ಬೆಳಗಾವಿ : ಅದ್ದೂರಿ ರಾಜ್ಯೋತ್ಸವಕ್ಕೆ ಬೆಳಗಾವಿ ಸರ್ವ ಸನ್ನದ್ಧವಾಗಿದೆ.ಕುಂದಾನಗರಿಯ ಎಲ್ಲೆಲ್ಲೂ ಕನ್ನಡದ ಕಂಪು ಜೋರಾಗಿದೆ. ಈ ಮಧ್ಯೆ ರಾಜ್ಯೋತ್ಸವದಂದೇ ಕರಾಳ ದಿನಾಚರಣೆಗೆ MES ಹಾಗೂ ಶಿವಸೇನೆಯ ಪುಂಡರು ಮಹಾಸಂಚು ಮಾಡಿದ್ದಾರೆ. ನಿಪ್ಪಾಣಿಯ ಕುಗನೊಳ್ಳಿ ಮೂಲಕ ಬೆಳಗಾವಿಗೆ ಹೊರಟಿದ್ದ ಮಹಾಪುಂಡರನ್ನು ಗಡಿಯಲ್ಲೇ ಪೊಲೀಸರು ತಡೆದು ತಕ್ಕ ಪಾಠ ಕಲಿಸಿದ್ದಾರೆ. ಕೈಲಿ ವಿಜಯ ಜ್ಯೋತಿ ಹಿಡಿದು ಬಂದಿದ್ದ ಸುಮಾರು 50ಕ್ಕೂ ಹೆಚ್ಚು ಶಿವಸೇನೆ ಪುಂಡರನ್ನು ಗಡಿಯಿಂದ ವಾಪಸ್ ಕಳುಹಿಸಲಾಗಿದೆ. ಪೊಲೀಸರೊಂದಿಗೆ ವಾಗ್ವಾದ ಮಾಡಿದ ನಾಡದ್ರೋಹಿಗಳು ಕೊನೆಗೂ ಬಂದ ದಾರಿಗೆ ಸುಂಕವಿಲ್ಲದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗೋವಾ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆಗೆ ಜಿಲ್ಲಾಡಳಿತ ಹಾಗೂ ಸಂಘಟನೆಗಳು ಸಜ್ಜಾಗಿವೆ.ನಗರದ ಹೃದಯ ಭಾಗ ಚೆನ್ನಮ್ಮ ವೃತ್ತದಲ್ಲಿ ಲಕ್ಷಕ್ಕೂ ಅಧಿಕ ಜನ ಸೇರಿ ಕುಣಿದು ಕುಪ್ಪಳಿಸಲಿದ್ದಾರೆ. ನಗರದಲ್ಲಿ ಕನ್ನಡ ಬಾವುಟ,ಲೈಟಿಂಗ್ ಸಿಂಗಾರ ಮಾಡಲಾಗಿದೆ. ಇನ್ನು ಈ ಬಾರಿ ರಾಜ್ಯೋತ್ಸವ ಜೊತೆಗೆ ಅಪ್ಪು ಉತ್ಸವ ಮಾಡಲಾಗುತ್ತಿದೆ. ಈಗಾಗಲೇ ಕನ್ನಡ ಬಾವುಟದ ಜೊತೆಗೆ ಅಪ್ಪು ಭಾವಚಿತ್ರದ ಟಿ- ಶರ್ಟ್, ಧ್ವಜ ಫುಲ್ ಮಾರಾಟವಾಗುತ್ತಿದೆ.
ಇನ್ನು ರಾಜ್ಯೋತ್ಸವದಂದೆ ಎಂಇಎಸ್ ಪುಂಡರಿಂದ ಕರಾಳ ದಿನಾಚರಣೆಗೆ ಕರೆ ಹಿನ್ನೆಲೆ ಖಾಕಿಪಡೆ ಫುಲ್ ಅಲರ್ಟ್ ಆಗಿದೆ. ಮೂವರು ಡಿಸಿಪಿ, 12 ಎಸಿಪಿ, 52 ಇನ್ಸ್‌ಪೆಕ್ಟರ್, 2500 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.9 ಸಿಎಆರ್ ತುಕಡಿ, 10 ಕೆಎಸ್‌ಆರ್‌ಪಿ ತುಕಡಿ, 500 ಗೃಹರಕ್ಷಕ ದಳ ಭದ್ರತೆ ಜೊತೆಗೆ 35 ವಿಡಿಯೋ ಕ್ಯಾಮರಾ, 300 ಸಿಸಿ ಕ್ಯಾಮರಾ, 8 ಡ್ರೋನ್ ಕ್ಯಾಮರಾ ಕಣ್ಗಾವಲು ಇಡಲಾಗಿದೆ.
ಇನ್ನೊಂದೆಡೆ ನಗರದ ಸರ್ದಾರ್ ಮೈದಾನದಲ್ಲಿ 1 ಲಕ್ಷ ಹೋಳಿಗೆ ಮಾಡಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋಳಿಗೆ ದಾಸೋಹ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಚಿತ್ರ ನಟ ಸಾಯಿಕುಮಾರ್ ಹೋಳಿಗೆ ದಾಸೋಹಕ್ಕೆ ಚಾಲನೆ ಕೊಡಲಿದ್ದಾರೆ.
ಒಟ್ಟಿನಲ್ಲಿ ಕುಂದಾನಗರಿಯಲ್ಲಿ ಕನ್ನಡಿಗರ ರಣಕಹಳೆ ಮೊಳಗಲಿದ್ದು, ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಸಂಘಟನೆಗಳು ಸಜ್ಜಾಗಿವೆ.
ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ