Monday, May 20, 2024

ಪ್ರಶಸ್ತಿಗೆ ಪ್ರಯತ್ನಿಸದೆ ಸಾಧನೆ ಮಾಡಿದಾಗ ಆ ಪ್ರಶಸ್ತಿಯ ಗೌರವ‌ ಹೆಚ್ಚಾಗುತ್ತದೆ; ಸಿಎಂ ಬೊಮ್ಮಾಯಿ

ಬೆಂಗಳೂರು: ಸಾಧನೆ ಮಾಡಿ ಪ್ರಶಸ್ತಿಗಾಗಿ ಪ್ರಯತ್ನ ಮಾಡದೇ ಇರುವವರಿಗೆ ಪ್ರಶಸ್ತಿ ದೊರೆಯುತ್ತದೆ. ಕೆಲವರು ಸಾಧನೆ ಮಾಡಿ ಪ್ರಶಸ್ತಿಗಾಗಿ ಸಾಕಷ್ಟು ಪ್ರಯತ್ನ‌ ಮಾಡುತ್ತಾರೆ. ಕೆಲವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸುಮ್ಮನಿರುತ್ತಾರೆ. ಅವರಿಗೆ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಾನಾ ರೀತಿಯಲ್ಲಿ ಪ್ರಶಸ್ತಿ ಇದೆ. ನಾವು ಚಿಕ್ಕವಯಸ್ಸಿನವರಾಗಿದ್ದಾಗ ನಾವು ಮಾತು ಉಚ್ಛರಿಸಿದಾಗ ನಮ್ಮ ತಾಯಿ ಪ್ರೀತಿಯಿಂದ ಮುತ್ತಿನ ಪ್ರಶಸ್ತಿ ಕೊಟ್ಟಾಗ ಆ ಪ್ರಶಸ್ತಿಯನ್ನು ಎಂದೂ ಮರೆಯಲು ಆಗುವುದಿಲ್ಲ. ಶಾಲೆಯಲ್ಲಿ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದಾಗ, ಯೌವನದಲ್ಲಿ ಮಿತ್ರರು ನಮ್ಮ ಸಾಧನೆ ಹಾಗೂ ನಾಯಕತ್ವ ಮೆಚ್ಚಿ ಹೊಗಳಿದಾಗ ಅದೊಂದು ರೀತಿಯ ರೋಮಾಂಚಕ ಪ್ರಶಸ್ತಿ. ಬದುಕಿನ ಎಲ್ಲ ಸ್ಥರಗಳಲ್ಲಿ ಹಲವು ರೀತಿಯ ಪ್ರಶಸ್ತಿಗಳು ದೊರೆಯುತ್ತವೆ ಎಂದು ಸಿಎಂ ಹೇಳಿದರು.

ಇಂದು ಇಲ್ಲಿ ಪ್ರಶಸ್ತಿ ಪಡೆದವರು ತಮ್ಮ ಜೀವನದುದ್ದಕ್ಕೂ ಪ್ರಶಸ್ತಿ ಪಡೆಯಲು ಪ್ರಯತ್ನ ಮಾಡಿಲ್ಲ. ತಮ್ಮ ಪಾಡಿಗೆ ಅವರು ಸಾಧನೆ ಮಾಡಿಕೊಂಡು ಬಂದಿದ್ದಾರೆ. ಇವರುಗಳನ್ನು ನಮ್ಮ ಆಯ್ಕೆ ಸಮಿತಿ ಗುರುತಿಸಿದ್ದಾರೆ. ಹೀಗೆ ಕೇಳದೇ ಪ್ರಶಸ್ತಿ ಪಡೆಯುವುದರಿಂದ ಆ ಪ್ರಶಸ್ತಿಗೆ ಮೆರುಗು ತಂದಿದೆ, ಗೌರವ ಬಂದಿದೆ. ಹಣ ಕೊಟ್ಟರೆ ಪ್ರಶಸ್ತಿ ಸಿಗುತ್ತದೆ. ಆದರೆ ಬದುಕಿನಲ್ಲಿ ಸಾಧಕರಾಗಿ ಯಶಸ್ವಿ ಜೀವನವನ್ನು ನಡೆಸುವುದೇ ದೊಡ್ಡ ಪ್ರಶಸ್ತಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬದುಕು ದೊಡ್ಡ ಪರೀಕ್ಷೆ. ನಾವು ಅಂದುಕೊಂಡದ್ದು ಯಾವುದೂ ಆಗುವುದಿಲ್ಲ. ಬದುಕಿನಲ್ಲಿ ಮುಗ್ಧತೆ ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿರುವ ಕುತೂಹಲ ನಮ್ಮ ಮುಗ್ಧತೆಯನ್ನು ಕಡಿಮೆಗೊಳಿಸುತ್ತದೆ. ಜತೆಗೆ ನಮ್ಮ ಆತ್ಮಸಾಕ್ಷಿಗಾಗಿ ಬುದುಕುವುದೂ ಬಹಳ ಕಷ್ಟ. ಇವೆರಡರಲ್ಲೂ ಜಯಶಾಲಿಗಳಾಗುವರು ದೊಡ್ಡ ಸಾಧಕರಾಗುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಕೆಲವರು ಅಸಮಾನ್ಯ ಸಾಧನೆ ಮಾಡುತ್ತಾರೆ. ಅದು ಸಮಾಜಕ್ಕೆ ತಿಳಿದು, ಇತರರಿಗೆ ಪ್ರೇರಣೆ ಆಗಬೇಕು. ಅದಕ್ಕಾಗಿ ಸಂಸ್ಥೆಗಳು ಸರ್ಕಾರಗಳು ಪ್ರಶಸ್ತಿಯನ್ನು ಕೊಡುತ್ತದೆ. ಜತೆಗೆ ಪ್ರಶಸ್ತಿ ಪಡೆದ ವ್ಯಕ್ತಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಸಮಾಜದಲ್ಲಿ ಸರಿಯಾದವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಾಗ ಪ್ರಶಸ್ತಿಗೂ ಗೌರವ ಬರುತ್ತದೆ, ಪ್ರಶಸ್ತಿ ಪಡೆದವರಿಗೂ ಗೌರವ ಹೆಚ್ಚುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ವಯಸ್ಸು ಮತ್ತು ಸಾಧನೆಗೆ ಸಂಬಂಧ ಇಲ್ಲ. ಯಾವುದೇ ವಯಸ್ಸಿನಲ್ಲೂ ಸಾಧನೆ ಮಾಡಬಹುದು. ಎಲ್ಲ ದೊಡ್ಡ ಸಾಧಕರೂ ಸಣ್ಣ ವಯಸ್ಸಲ್ಲೇ ಜಗತ್ತು ಬಿಟ್ಟು ಹೋಗಿದ್ದಾರೆ. 60 ವರ್ಷ ಮೀರಿರುವವರಿಗೆ ಮಾತ್ರ ಪ್ರಶಸ್ತಿ ಎನ್ನುವುದು ತಪ್ಪು ನಿರ್ಧಾರ. ಸಣ್ಣ ವಯಸ್ಸಿನ ಸಾಧಕರಿಗೂ ಪ್ರಶಸ್ತಿ ಕೊಟ್ಟರೆ ಅವರು ಮುಂದೆ ಇನ್ನೂ ದೊಡ್ಡ ಸಾಧನೆ ಮಾಡಬಹುದು. ಇದು ಇತರ ಯುವಕರಿಗೂ ಪ್ರೇರಣೆ ಆಗುತ್ತದೆ. ಮುಂದಿನ ವರ್ಷ ಈ ಬಗ್ಗೆ ಬದಲಾವಣೆ ಆಗುತ್ತದೆ. ವಯಸ್ಸಿನ ಗಡಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ಕೊಡುವ ವ್ಯವಸ್ಥೆ ಆಗುತ್ತದೆ. ಈ ಬಗ್ಗೆ ಕೊರ್ಟ್‌ಗೆ ಅಫಿಡವಿಟ್‌ ನೀಡಿ ನಿಯಮ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದುವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವವರನ್ನು ಸಂಪರ್ಕ ಮಾಡಿ ಕನ್ನಡ ನಾಡನ್ನು ಹೇಗೆಲ್ಲಾ ಕಟ್ಟಬಹುದು ಎನ್ನುವ ಅವರ ಅಭಿಪ್ರಾಯ ಪಡೆದುಕೊಳ್ಳುವ ಕೆಲಸ ಆಗಬೇಕು. ವ್ಯತಿರಿಕ್ತ ಪಡಿಸ್ಥಿತಿಯಲ್ಲೂ ಅವರು ಗಟ್ಟಿಯಾಗಿ ನಿಂತು ಸಾಧನೆ ಮಾಡಿದ್ದರ ಅವರ ಅನುಭವ ಮತ್ತು ಸಂದೇಶದ ಒಂದು ಮಾರ್ಗದರ್ಶಿ ಕೃತಿ ಹೊರತರಲಾಗುವುದು. ನಾಡು ಕಟ್ಟಲು ಅಭಿಪ್ರಾಯದ ಸಾಮ್ಯತೆ ಬರುವ ಅವಶ್ಯಕತೆ ಇದೆ. ನಾಡು ಕಟ್ಟುವ ವಿಚಾರದಲ್ಲಿ ಒಂದಾಗಬೇಕು. ಜನರನ್ಮು ಫಲಾನುಭವಿಗಳಾಗಿ ಮಾಡದೇ ಅವರನ್ನು ಪಾಲುದಾರರನ್ನಾಗಿ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

RELATED ARTICLES

Related Articles

TRENDING ARTICLES