ಬೆಂಗಳೂರು : ನಗುಮುಖದ ರಾಜಕುಮಾರ, ರಾಜರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಹೈಕೋರ್ಟ್ ಎದುರಿನ ಮೆಟ್ಟಿಲುಗಳ ಮೇಲೆ ಬೃಹತ್ ವೇದಿಕೆ ಸಿದ್ಧಮಾಡಲಾಗಿದೆ.
ಇನ್ನು ಈ ಕಾರ್ಯಕ್ರಮಕ್ಕೆ 20 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ವಿಧಾನಸೌಧದ ಎದುರಿನ 2 ರೋಡ್‌ಗಳನ್ನು ಕ್ಲೋಸ್ ಮಾಡಿ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ಇನ್ನು ಕಾರ್ಯಕ್ರಮದ ಉಸ್ತುವಾರಿಯನ್ನು ಸಚಿವರಾದ ಅಶೋಕ್, ಸುನೀಲ್ ಕುಮಾರ್ ಕಾರ್ಕಳ, ಡಾ.ಅಶ್ವಥ್ ನಾರಾಯಣ ವಹಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ರಜನಿಕಾಂತ್, ಜ್ಯೂನಿಯರ್ NTR, ಸುಧಾಮೂರ್ತಿ ಭಾಗಿಯಾಗಲಿದ್ದಾರೆ. ಇನ್ನು ರಾಜ್ ಕುಟುಂಬದ ಎಲ್ಲರೂ ಭಾಗಿಯಾಗಲಿದ್ದು ಎಲ್ಲಾ ವಿಭಾಗದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ.
ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಚಿವ ಅಶೋಕ್ ಸಿದ್ದತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮ ನಾಳೆ 4 ಗಂಟೆಗೆ ಆರಂಭವಾಗಲಿದೆ. ಅವರ ಪತ್ನಿ ಅಶ್ವಿನಿ ಅವರಿಗೆ ಪ್ರಶಸ್ತಿ ನೀಡಲಿದ್ದೇವೆ. ಸಿಎಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಾಗೆನೇ ಎಲ್ಲರಿಗೂ ಮುಕ್ತ ಆಹ್ವಾನ ಇದೆ ಎಂದು ಹೇಳಿದರು.
ಅದಲ್ಲದೇ, ಸಚಿವ ಸುನೀಲ್ ಕುಮಾರ್ ಕಾರ್ಕಳ ಮಾತನಾಡಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜ್ಯೋತ್ಸವ ನಡೆಯಲಿದೆ. 10ಕ್ಕೂ ಹೆಚ್ಚು LED ಸ್ಕ್ರೀನ್ ಹಾಕಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಧಾನಸೌಧದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಐತಿಹಾಸಿಕ ಕ್ಷಣವನ್ನು ಕಂಣ್ತುಂಬಿಕೊಳ್ಳಲು ಇಡೀ ಭಾರತೀಯರು ಕಾಯುತ್ತಿದ್ದಾರೆ. ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವರ್ಣರಂಜಿತ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.