ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳಲ್ಲಿ ದೀಪಾವಳಿ ಹಬ್ಬದ ಬಳಿಕವೂ 3-4 ರಾತ್ರಿಗಳ ಕಾಲ ಅಂಟಿಕೆ-ಪಿಂಟಿಕೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಹಿಮ್ಮೇಳ ಮತ್ತು ಮುಮ್ಮೇಳದ ನಡುವೆ ಉದ್ಭವಿಸುವ ವಿಶೇಷ ವಾದ್ಯವೇ ಅಂಟಿಕೆ-ಪಿಂಟಿಕೆ.
ತೀರ್ಥಹಳ್ಳಿ-ಹೊಸನಗರ ಭಾಗದ ಯಡೂರು ಗ್ರಾಮಸ್ಥರು ಕೂಡ ಅಂಟಿಕೆ-ಪಿಂಟಿಕೆಯನ್ನು ಪ್ರತಿವರ್ಷ ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿದ್ದಾರೆ. ಗ್ರಾಮದ ಅಂಟಿಕೆ-ಪಿಂಟಿಕೆ ತಂಡ ಇಡೀ ರಾತ್ರಿ ಜ್ಯೋತಿಗಳನ್ನು ಹಿಡಿದು ಮನೆಮನೆಗಳಿಗೆ ತೆರಳಿ ಹಾಡುವ ಪರಿ ನಿಜಕ್ಕೂ ಸಂಸ್ಕೃತಿಯ ಪ್ರತೀಕವೇ ಸರಿ. ಅಂಟಿಕೆ-ಪಿಂಟಿಕೆ ಸಂಪ್ರದಾಯದ ಪದಗಳು, ಸಾಂದರ್ಭಿಕ ಹಾಡುಗಳು, ಜಾತಿ ಬೆಡಗುಗಳು ಕಥನ ಗೀತೆಗಳನ್ನು ಒಳಗೊಂಡಿರುವ ಜನಪದ ಕಲೆಯಾಗಿದೆ.
ಅಂಟಿಕೆ-ಪಿಂಟಿಕೆ ಎಂದರೆ ಆಶು ಕವಿತೆ ಕೂಡ. ಸನ್ನಿವೇಶಗಳಿಗೆ ಪ್ರಚೋದನೆಗೊಂಡು ಸ್ಥಳದಲ್ಲೆ ಹೊಸ ಹಾಡು ಕಟ್ಟುವ ಕಲೆ ಕೂಡ. ರಾತ್ರಿ ಗ್ರಾಮಸ್ಥರೆಲ್ಲರೂ ಸೇರಿ ಎಲ್ಲಾ ಮನೆ-ಮನೆಗಳಿಗೂ ತೆರಳಿ ಹಾಡಿನ ಮೂಲಕವೇ ಬಾಗಿಲನ್ನು ತಟ್ಟುತ್ತಾರೆ. ಆಗ ಮನೆಯ ಮಾಲೀಕರು ಹೊರಬಂದು ಜ್ಯೋತಿಯನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿ ಊರ ಜ್ಯೋತಿಯಿಂದ ಮನೆಯ ದೀಪವನ್ನು ಬೆಳಗಿಸಿಕೊಂಡು ತಮ್ಮ ಕೈಲಾದ ಕಾಣಿಕೆ ಅರ್ಪಿಸುತ್ತಾರೆ.
ಒಟ್ಟಿನಲ್ಲಿ ಜ್ಯೋತಿಯ ಮೂಲಕ ವಿವಿಧತೆಯಲ್ಲಿ ಏಕತೆ ಮತ್ತು ಭಾವೈಕ್ಯತೆಯನ್ನು ಅಂಟಿಕೆ-ಪಿಂಟಿಕೆ ಜಾನಪದದ ಮೂಲಕ ಸಾರಲಾಗುತ್ತದೆ.
ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.