Saturday, December 28, 2024

ಹಾವೇರಿಯಲ್ಲಿ ಹೋರಿ ಹಬ್ಬದ ಸಂಭ್ರಮ

ಹಾವೇರಿ : ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅನಾದಿ ಕಾಲದಿಂದಲೂ ಹಾವೇರಿ ಜಿಲ್ಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವ, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೈತ ಸಮೂಹ ಸಂಭ್ರಮದಿಂದ ಪಾಲ್ಗೊಂಡಿತ್ತು.ಹಾವೇರಿ ನಗರದ ವೀರಭದ್ರೇಶ್ವರ ದೇಗುಲದ ಮುಂಭಾಗದಲ್ಲಿ ಹೋರಿ ಬೆದರಿಸುವ ಜಾನಪದ ಕ್ರೀಡೆ ನೋಡಲು ಸಾವಿರಾರು ಜನರು ಆಗಮಿಸಿದ್ರು. ಹಟ್ಟಿಹಬ್ಬ ಅಂತಾನೆ ಜನಜನಿತವಾಗಿರುವ ಈ ಕ್ರೀಡೆಯಲ್ಲಿ ನೂರಾರು ಹೋರಿಗಳು ಭಾಗಿಯಾಗಿದ್ವು.ಜನಸಾಗರದ ನಡುವೆಯೇ ಓಡಿದ ಹೋರಿಗಳು ಜನತೆಗೆ ರಸದೌತಣ ನೀಡಿದವು.ರೇಷ್ಮೆ ಜೂಲು, ಜರತಾರಿ ಪಟ, ಗರಿಗರಿ ರಿಬ್ಬನ್ನು, ಕಾಲಿಗೆ ಗೆಜ್ಜೆ ಸೇರಿ ಕೆಜಿಗಟ್ಟಲೇ ಒಣ ಕೊಬ್ಬರಿ ಕಟ್ಟಿ ಎತ್ತುಗಳನ್ನು ಸಿಂಗಾರಗೊಳಿಸಲಾಗಿತ್ತು. ಎತ್ತುಗಳ ಬೆನ್ನ ಮೇಲೆ ರೈತರು ತಮಗಿಷ್ಟವಾದ ತಾರೆ, ನಾಯಕರ ಹಾಗೂ ದೇವರ ಹೆಸರು ಬರೆದು ಸಂಭ್ರಮಿಸಿದರು.

ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ಹೋರಿ ಹಿಡಿದು ತರುತ್ತಿದ್ದ ರೈತರು, ಅವು ಯಾರ ಕೈಗೂ ಸಿಗದೇ ರಭಸದಿಂದ ಓಡುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಮಟೆ ಬಾರಿಸಿ ಪಟಾಕಿ ಸಿಡಿಸುವ ಮೂಲಕ ಹೋರಿ ಬೆದರಿಸಲಾಯಿತು. ಹೋರಿಗಳು ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಅತ್ಯಂತ ರಭಸದಿಂದ ಓಡಿ ಜನಮನ ರಂಜಿಸಿದವು. ಹೋರಿಯ ಕುತ್ತಿಗೆಯಲ್ಲಿದ್ದ ಕೊಬ್ಬರಿ ಹರಿಯಲು ನೂರಾರು ಯುವಕರು ಜೀವದ ಹಂಗೂ ತೊರೆದು ಮುಗಿಬಿದ್ದಿದ್ದರು.

ಹೋರಿಗಳ ಓಟದ ಭರಾಟೆಯಿಂದ ಸಂಭ್ರಮಗೊಂಡ ಜನತೆ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ್ರು. ಹೋರಿ ಹಿಡಿಯುವ ಭರಾಟೆಯಲ್ಲಿ ಕೆಲವು ಯುವಕರು ನೆಲಕ್ಕುರುಳಿ ಸಣ್ಣ ಪುಟ್ಟ ಗಾಯ ಮಾಡಿಕೊಂಡರು.

ವೀರೇಶ ಬಾರ್ಕಿ, ಪವರ್ ಟಿವಿ ಹಾವೇರಿ.

RELATED ARTICLES

Related Articles

TRENDING ARTICLES