Monday, December 23, 2024

ಜಗಮೆಚ್ಚಿದ ಕೆಜಿಎಫ್ ದಾಖಲೆ ಉಡೀಸ್ ಮಾಡಿದ ಕಾಂತಾರ

ಇಲ್ಲಿಯವರೆಗೆ ಕನ್ನಡದ ನಂ.1 ಸಿನಿಮಾ ಯಾವುದು ಅಂದ್ರೆ ಕೆಜಿಎಫ್ ಕಡೆ ಬೆರಳು ತೋರಿಸಲಾಗ್ತಿತ್ತು. ಆದ್ರೀಗ ಟ್ರೆಂಡ್ ಬದಲಾಗಿದೆ. ಯಶ್​ ಕೆಜಿಎಫ್​ನ ಸಹ ಮೀರಿಸಿ ಅಗ್ರಸ್ಥಾನಕ್ಕೇರಿದೆ ಕಾಂತಾರ. ಯೆಸ್.. ವರ್ಲ್ಡ್​ವೈಡ್ ಸಂಚಲನ ಮೂಡಿಸಿರೋ ಕಾಂತಾರ, ಕರ್ನಾಟಕ & ಅಂಧ್ರದಲ್ಲಿ ನೂತನ ದಾಖಲೆ ಬರೆದಿದೆ. ಅದನ್ನ ಸ್ವತಃ ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಿದೆ.

  • ಕಾಂತಾರ ಕರ್ನಾಟಕದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿರೋ ಚಿತ್ರ
  • ಆಂಧ್ರ- ತೆಲಂಗಾಣದಲ್ಲಿ 10ನೇ ದಿನವೂ 1.30 ಕೋಟಿ ಕಲೆಕ್ಷನ್
  • ಯಶಸ್ವಿ 25 ದಿನ.. ಊರ್ವಶಿಯಲ್ಲಿ ಬಾಹುಬಲಿ ರೆಕಾರ್ಡ್ಸ್ ಬ್ರೇಕ್

​ ಸಿನಿಮಾವೊಂದರ ಸಕ್ಸಸ್​ಗೆ ಬರೀ ಅದ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಒಂದೇ ಮಾನದಂಡ ಆಗೋದಿಲ್ಲ. ಜನರ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಕೂಡ ಮುಖ್ಯ. ವಿಮರ್ಶಕರ ವಿಮರ್ಶೆಗಳೂ ಪ್ರತಿಕೂಲವಾಗಿರಬೇಕು. ಜೊತೆಗೆ ಆ ಸಿನಿಮಾ ಎಲ್ಲಾ ಌಂಗಲ್​ನಿಂದ ಗಟ್ಟಿತನದಿಂದ ಕೂಡಿರಬೇಕಾಗುತ್ತೆ. ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಕಾಂತಾರ ಚಿತ್ರದಲ್ಲಿ ಕಲೆಯನ್ನ ಕಮರ್ಷಿಯಲ್ ಅಂಶಗಳ ಜೊತೆ ಅದ್ಭುತವಾಗಿ ಬ್ಲೆಂಡ್ ಮಾಡಿ ಪ್ರಸ್ತುತಪಡಿಸಲಾಗಿದೆ.

ಕನ್ನಡ ಚಿತ್ರರಂಗ ಕೆಜಿಎಫ್​ವರೆಗೂ ಒಂದು ಲೆಕ್ಕ. ಕೆಜಿಎಫ್ ಬಳಿಕ ಹೊಸ ಲೆಕ್ಕ ಅನ್ನುವಂತಾಗಿತ್ತು. ಆದ್ರೀಗ ವಿಶ್ವದ ಗಮನ ಸೆಳೆದ ಪ್ರಶಾಂತ್ ನೀಲ್- ಯಶ್ ಕಾಂಬೋನ ಕೆಜಿಎಫ್ ಸಿನಿಮಾದ ಆಲ್​ಟೈಂ ದಾಖಲೆಯನ್ನೇ ಬ್ರೇಕ್ ಮಾಡೋ ಮೂಲಕ ಅಚ್ಚರಿ ಮೂಡಿಸಿದೆ ಕಾಂತಾರ. ಹೌದು.. ಕರ್ನಾಟಕದಲ್ಲಿ ಕೆಜಿಎಫ್​ ವೀಕ್ಷಕರಿಗಿಂತಲೂ ಕಾಂತಾರ ವೀಕ್ಷಿಸಿದವ್ರ ಸಂಖ್ಯೆ ಮೇಲುಗೈ ಸಾಧಿಸಿದೆ. ಇದನ್ನ ಸ್ವತಃ ಹೊಂಬಾಳೆ ಫಿಲಂಸ್ ಅವ್ರೇ ಖಚಿತ ಪಡಿಸಿದ್ದಾರೆ.

ಅವರ ಪ್ರಕಾರ 25 ದಿನದಲ್ಲಿ ಬರೋಬ್ಬರಿ 77 ಲಕ್ಷ ಕರ್ನಾಟಕದ ಮಂದಿ ಕಾಂತಾರ ಸಿನಿಮಾ ನೋಡಿದ್ದಾರೆ. ಇದು ಕೆಜಿಎಫ್ ದಾಖಲೆಯನ್ನ ಸರಿಗಟ್ಟಿದ್ದು, ಪಕ್ಕದ ಆಂಧ್ರ ಹಾಗೂ ತೆಲಂಗಾಣದಲ್ಲೂ ಬಿಗ್ ಸ್ಕ್ರೀನ್ ಮೇಲೆ ಕಾಂತಾರ ಆರ್ಭಟ ಸಖತ್ ಜೋರಿದೆ. ತೆಲುಗು ವರ್ಷನ್ ರಿಲೀಸ್ ಆದ 10ನೇ ದಿನವೂ ಸಹ, ಅಲ್ಲಿ ಒಂದೂವರೆ ಕೋಟಿ ಗಳಿಸ್ತಿರೋದು ಇಂಟರೆಸ್ಟಿಂಗ್.

ಸರ್ದಾರ್, ಪ್ರಿನ್ಸ್, ಓರಿ ದೇವುಡ ಸಿನಿಮಾಗಳಿಗೆ ಪೈಪೋಟಿ ನೀಡಿರೋ ಕಾಂತಾರ, ಅಲ್ಲು ಅರ್ಜುನ್ ಅವ್ರ ಡಿಸ್ಟ್ರಿಬ್ಯೂಷನ್​ನಲ್ಲಿ ಜಗಮಗಿಸುತ್ತಿದೆ. ಇನ್ನು ನಮ್ಮ ಬೆಂಗಳೂರಿನ ಊರ್ವಶಿ ಥಿಯೇಟರ್​ನಲ್ಲಿ ಎರಡೇ ವಾರಕ್ಕೆ ಸಿನಿಮಾಗಳು ಎತ್ತಂಗಡಿ ಆಗಿಬಿಡುತ್ತವೆ. ರಾಜಮೌಳಿಯ ಬಾಹುಬಲಿ ಅಂತಹ ಸಿನಿಮಾನೇ ಮೂರನೇ ವಾರದವರೆಗೆ ಅಸ್ತಿತ್ವ ಉಳಿಸಿಕೊಂಡಿತ್ತು. ಆದ್ರೆ ರಿಷಬ್ ಶೆಟ್ರ ಕಾಂತಾರ ಮಾತ್ರ ಐದನೇ ವಾರವೂ ಗಟ್ಟಿಯಾಗಿ ನೆಲೆನಿಂತಿದೆ. ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ.

ಹೊಂಬಾಳೆ ಫಿಲಂಸ್​ ಬ್ಯಾನರ್​ನಡಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಿಸಿರೋ ಎಲ್ಲಾ ಸಿನಿಮಾಗಳಿಗಿಂತ ಇದು ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಹಾಗಾಗಿಯೇ 100ಕೋಟಿ ಬಾಕ್ಸ್ ಆಫೀಸ್ ಜೊತೆ ಜನಮನ್ನಣೆ ಕೂಡ ಪಡೆಯುತ್ತಿದೆ. ಯಶಸ್ವಿ 25ದಿನ ಪೂರೈಸಿ, 50ನೇ ದಿನದತ್ತ ಮುನ್ನುಗ್ಗುತ್ತಿರೋ ಕಾಂತಾರ, ಕಾಡ್ಗಿಚ್ಚಿನಂತೆ ವಿಶ್ವದಾದ್ಯಂತ ಹರಡಿದೆ. ಇದ್ರ ವಿಜಯೋತ್ಸವ ಹೀಗೆಯೇ ಮುಂದುವರೆಯಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES