ಬೆಂಗಳೂರು : ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರೋ ಖರ್ಗೆ, ಹೊಸ ಹುಮ್ಮಸ್ಸು, ಉತ್ಸಾಹದಿಂದ ಎಂಟ್ರಿ ಕೊಡ್ತಿದ್ದಾರೆ. 9 ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ಎದುರಾಗುತ್ತಿದ್ದು, ಹೊಡೆದು ಹಂಚಿ ಹೋಗುತ್ತಿರೋ ಪಕ್ಷವನ್ನ ಒಗ್ಗೂಡಿಸೋ ದೊಡ್ಡ ಸವಾಲು ಖರ್ಗೆ ಮುಂದಿದೆ. ರಾಷ್ಟ್ರ ರಾಜಕಾರಣದಲ್ಲಿ ಮಾತ್ರವಲ್ಲದೇ ಕರ್ಮ ಭೂಮಿ ಕರ್ನಾಟಕ ಪಾಲಿಟಿಕ್ಸ್ ಮೇಲೂ ಖರ್ಗೆ ಪ್ರಭಾವ ಬೀರೋದ್ರಲ್ಲಿ ಎರಡು ಮಾತಿಲ್ಲ. ಸಿದ್ದು, ಡಿಕೆಶಿ ಕೋಲ್ಡ್ ವಾರ್ ನ್ನೇ ಬಂಡವಾಳ ಮಾಡಿಕೊಂಡು, ಚುನಾವಣೆಗಳಲ್ಲಿ ಗೆದ್ದು ಬೀಗುತ್ತಿರೋ ಬಿಜೆಪಿಯನ್ನ ಬಗ್ಗುಬಡಿಯೋದಕ್ಕೆ ಖರ್ಗೆ ಪ್ಲಾನ್ ಮಾಡಿಕೊಂಡಿದ್ದಾರೆ.
ರಾಜ್ಯ ಕಂಡ ಪ್ರಬಲ ದಲಿತ ನಾಯಕನ ರೀ ಎಂಟ್ರಿಯಿಂದ ಬಿಜೆಪಿಗೆ ಒಳಗೊಳಗೇ ತಳಮಳ ಶುರುವಾಗಿದೆ.. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಬಿಜೆಪಿ ನಾಯಕರು ಅಣಿಯಾಗ್ತಿರೋ ನಡುವೆಯೇ, ಖರ್ಗೆ ಪಟ್ಟಾಭಿಷೇಕವಾಗಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಆ ಭಾಗಕ್ಕೆ 371( j) ವಿಶೇಷ ಸ್ಥಾನಮಾನ ಒದಗಿಸಿಕೊಟ್ಟ ಕೀರ್ತಿ ಖರ್ಗೆಯದ್ದು. ಅದನ್ನ ಯಾರೂ ಮರೆಯುವಂತಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಮೇಲೆ ಖರ್ಗೆ ಋಣ ಎಷ್ಟಿದೆಯೋ, ಅಷ್ಟೇ ಋಣ ಆ ಭಾಗದ ಜನರ ಮೇಲಿದೆ. ಹೀಗಾಗಿ ಮೀಸಲಾತಿ ಹೆಚ್ಚಿಸಿ ಬೀಗುತ್ತಿರೋ ಬಿಜೆಪಿಗರ ಪ್ಲಾನ್ ಗಳೆಲ್ಲಾ ಉಲ್ಟಾ ಆಗಬಹುದು.
ಇನ್ನು ಸಿದ್ದು, ಡಿಕೆಶಿ ನಡುವೆ ನಡೀತಿರೋ ಕೋಲ್ಡ್ ವಾರ್ ಶಮನಕ್ಕೆ ಖುದ್ದು ರಾಹುಲ್ ಗಾಂಧಿ ಎಂಟ್ರಿಯಾಗಿದ್ರೂ ಶಮನವಾಗಿರಲಿಲ್ಲ. ಈಗ ಈ ಇಬ್ಬರ ನಡುವೆ ಸಮನ್ವಯ ಸಾಧಿಸಿ, ಸಾಮೂಹಿಕ ನಾಯಕತ್ವದಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಖರ್ಗೆ ಮೇಲಿದೆ. ಇಷ್ಟು ದಿನ ದಲಿತ ನಾಯಕರನ್ನ ಮೂಲೆಗುಂಪು ಮಾಡಿದ್ದ ಆಕ್ರೋಶವೂ ಅವರಲ್ಲಿರಬಹುದು. ಹೀಗಾಗಿ ಖರ್ಗೆ ಸೆಕೆಂಡ್ ಇನ್ನಿಂಗ್ಸ್ ಯಾವ ರೀತಿ ಇರುತ್ತೋ ಅನ್ನೋ ಕುತೂಹಲ ಕೈ ಪಾಳಯಕ್ಕೂ ಕಾಡ್ತಿದೆ. ಇಷ್ಟು ದಿನದಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಂಬ ಎರಡು ಪವರ್ ಸೆಂಟರ್ ಗಳು ರಾಜ್ಯ ಕಾಂಗ್ರೆಸ್ ನಲ್ಲಿದೆ. ಇನ್ಮುಂದೆ ಖರ್ಗೆ ಮೂರನೇ ಪವರ್ ಸೆಂಟರ್ ಆಗಿ ಹೊರಹೊಮ್ಮುತ್ತಾರೆ ಎನ್ನೋದ್ರಲ್ಲಿ ಡೌಟಿಲ್ಲ.
ಇನ್ನು ರಾಜ್ಯ ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಕೂಗು ಮೊದಲಿನಿಂದಲೂ ಕೇಳಿ ಬರ್ತಿದೆ. ಸಿದ್ದು – ಡಿಕೆಶಿ ನಡುವೆ ಮುಂದಿನ ಸಿಎಂ ಯಾರಾಗಬೇಕು ಅನ್ನೋ ವಾರ್ ತಾರಕಕ್ಕೇರಿದಾಗಲೇ, ದಲಿತ ಸಿಎಂ ಕೂಗು ಜೋರಾಗಿತ್ತು. ಆಗ ದಲಿತ ನಾಯಕರೆಲ್ಲಾ ಸಭೆ ಸೇರಿ ಗಂಭೀರ ಚರ್ಚೆಗಳನ್ನ ನಡೆಸಿದ್ರು. ಈಗ ದಲಿತ ನಾಯಕ ಎಐಸಿಸಿಗೆ ಅಧಿಪತಿಯಾಗಿರೋದ್ರಿಂದ ಸಿಎಂ ಗಾದಿ ಮೇಲೆ ಕೆಲವರು ಟವೆಲ್ ಹಾಕಲು ಮುಂದಾಗಿದ್ದಾರೆ. ಮೊನ್ನೆ ತಾನೇ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಸಿಎಂ ಆಗೋ ಇಂಗಿತವನ್ನ ವ್ಯಕ್ತಪಡಿಸಿದ್ರು. ಸಾರ್ವತ್ರಿಕ ಚುನಾವಣೆಯಲ್ಲಿ ಪರಮೇಶ್ವರ್ ಗೆದ್ದು ಬಂದ್ರೆ, ದಲಿತ ಕೋಟಾದಲ್ಲಿ ಸಿಎಂ ಆದ್ರೂ ಆಗಬಹುದು. ಸದ್ಯ ಈಗ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಾರ್ ಸೈಲೆಂಟ್ ಆಗಿದ್ರೂ, ಮುಂಬರುವ ದಿನಗಳಲ್ಲಿ ಸಿಎಂ ಹುದ್ದೆಗೆ ಸಿಕ್ಕಾಪಟ್ಟೆ ಫೈಟ್ ಶುರುವಾಗಬಹುದು.
ಇನ್ನು ಮಲ್ಲಿಕಾರ್ಜುನ ಖರ್ಗೆಗಾಗಿ ಅಭಿನಂದನಾ ಸಮಾವೇಶ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಬೆಂಗಳೂರು ಹಾಗೂ ಕಲ್ಬುರ್ಗಿಯಲ್ಲಿ ಲಕ್ಷಾಂತರ ಕಾರ್ಯಕರ್ತರು ಹಾಗೂ ಖರ್ಗೆ ಅಭಿಮಾನಿಗಳನ್ನ ಸೇರಿಸಿ ಉತ್ಸವ ರೀತಿ ಸಮಾರಂಭ ನಡೆಸಲು ತೀರ್ಮಾನ ಮಾಡಿಕೊಂಡಿದ್ದಾರೆ.