ವಿಜಯಪುರ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲ್ಲ, ಮಾಜಿ ಸಚಿವ, ಶಾಸಕ ಎಂ.ಬಿ ಪಾಟೀಲ್ ಅವರು ಮುಖ್ಯಮಂತ್ರಿ ಆಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ವಿಜಯಪುರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ವಿಜಯಪುರದ ಮಹೇಶ್ವರ ಕಲ್ಯಾಣ ಮಂಟಪದಲ್ಲಿಂದು ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಯತ್ನಾಳ್, ನಮ್ಮ ಎಂಬಿ ಪಾಟೀಲರು ರಾಷ್ಟ್ರ ಮಟ್ಟದ ನಾಯಕರಾಗಿದ್ದಾರೆ. ದೇಶವನ್ನುದ್ದೇಶಿಸಿ ಮಾತನಾಡಿಕೊಂಡು ರಾಹುಲ್ ಜೊತೆ ಪಾದಾಯತ್ರೆ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಎಲ್ಲಿಯೂ ವಿರೋಧ ಪಕ್ಷ ಇದೆಯೋ ಇಲ್ಲವೋ ಅನ್ಸಿಸ್ತಿದೆ. ಬರೀ ನಮ್ಮದೇ ಪಕ್ಷದ ಹೆಸರು ಕೇಳಿ ಬರುತ್ತಿದೆ ಎಂದರು.
ವಿಜಯಪುರದಲ್ಲಿ ಕಾಂಗ್ರೆಸ್ ಎಲ್ಲಿದೆಯೋ, ಜೆಡಿಎಸ್ ಎಲ್ಲಿದೆಯೋ, ಕಾಂಗ್ರೆಸ್ನ ಕೆಲವು ರಾಜಕೀಯ ನಾಯಕರಿದ್ದಾರೆ ಅಷ್ಟೇ, ಆ ಕಡೆ ಕಾಂಗ್ರೆಸ್ಗೆ ಪಕ್ಕಾ ಮಾಡ್ತೀನಿ ಅನ್ನೋದು ಅದು ಮಾಡಲ್ಲ. ರಾತ್ರಿ 12 ಗಂಟೆಯವರೆಗೆ ಲಿಸ್ಟ್ ಹಿಡಿದುಕೊಂಡು ಫೋನ್ ಮಾಡಿಕೊಂಡು ಕುಳ್ತಿರ್ತಾನೆ. ಫೋನ್ ನಲ್ಲಿ ಹೇಳಿದ್ರೆ ಯಾರಾದರೂ ವೋಟ್ ಹಾಕ್ತಾರಾ ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಅಭಿವೃದ್ಧಿ, ಹಿಂದೂತ್ವದ ಮುಂದೆ ಯಾರ ಫೋನ್ ಕಾಲ್, ನಾಟಕ ನಡೆಯಲ್ಲ. ನಮ್ಮ ಜನ ಸುರಕ್ಷಿತರಾಗಿ ಇರಬೇಕಾದ್ರೆ ಬಿಜೆಪಿ ಬರಬೇಕು. ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಅಂದಾಜು 28 ಸ್ಥಾನ ಬರುತ್ತವೆ ಎಂದು ಗುಪ್ತಚರ ಇಲಾಖೆ ಮಾಹಿತಿ ಇದೆ. ಈ ಸಲ ಮೊದಲ ಬಾರಿಗೆ ಅತ್ಯಧಿಕ ಬಹುಮತದೊಂದಿಗೆ ಪಾಲಿಕೆ ಅಧಿಕಾರ ಹಿಡಲಿದ್ದೇವೆ ಎಂದ ಯತ್ನಾಳ್ ಭರವಸೆ ವ್ಯಕ್ತಪಡಿಸಿದರು.