Sunday, May 19, 2024

ಸಿದ್ದು – ಡಿಕೆಶಿ ಜುಗಲ್‌ಬಂದಿ ಯಾತ್ರೆಯೋ..? ಪ್ರತ್ಯೇಕ ಯಾತ್ರೆಯೋ..?

ಬೆಂಗಳೂರು : ಸಾರ್ವತ್ರಿಕ ಚುನಾವಣೆಗೆ ಆರೇಳು ತಿಂಗಳು ಬಾಕಿ ಇರುವಾಗಲೇ, ಚುನಾವಣಾ ಅಖಾಡಕ್ಕೆ ಘಟಾನುಘಟಿಗಳು ಎಂಟ್ರಿ ಕೊಡ್ತಿದ್ದಾರೆ. ರಾಹುಲ್ ಗಾಂಧಿ ನಡೆಸ್ತಿರೋ ಭಾರತ್ ಜೋಡೋ ಐಕ್ಯತಾ ಯಾತ್ರೆ ಕಾಂಗ್ರೆಸ್‌ ನಾಯಕರಿಗೆ ಬೂಸ್ಟ್ ಕೊಟ್ಟಿದೆ. ಇದೇ ಹುಮ್ಮಸ್ಸಿನಲ್ಲಿ ಯಾತ್ರೆ ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ರಥಯಾತ್ರೆ ನಡೆಸೋದಕ್ಕೆ ಭರ್ಜರಿ ತಯಾರಿ ಆಗಿತ್ತು. ಅದಕ್ಕಾಗಿ ಐಷರಾಮಿ ಬಸ್ ಕೂಡ ಸಿದ್ದಗೊಂಡಿತ್ತು. ಆದ್ರೆ, ರಾಹುಲ್ ಗಾಂಧಿ ಅದಕ್ಕೆ ಬ್ರೇಕ್ ಹಾಕಿದ್ರು. ಒಬ್ಬರೇ ಬೇಡ. ಇಬ್ಬರೂ ಒಟ್ಟಾಗಿ ಯಾತ್ರೆ ಮಾಡಿ ಅಂತ ಸೂಚನೆ ನೀಡಿದ್ರು.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ರಥಯಾತ್ರೆಗೆ ಕೌಂಟ್‌ಡೌನ್ ಶುರುವಾಗಿದೆ ಅಂತಾನೇ ಕಾಂಗ್ರೆಸ್‌ನ ಒಂದು ಗುಂಪು ಹೇಳ್ತಾ ಇತ್ತು. ಆದ್ರೆ, ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಯಾವುದೂ ಅಂತಿಮವಾಗಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಟ್ಟಾಗಿ ರಥಯಾತ್ರೆ ಮಾಡ್ತಾರೋ..? ಅಥವಾ ಇಬ್ಬರೂ ಪ್ರತ್ಯೇಕವಾಗಿ ಯಾತ್ರೆ ನಡೆಸ್ತಾರೋ ಗೊತ್ತಿಲ್ಲ. ಈ ಸಂಬಂಧ ಕಾಂಗ್ರೆಸ್ ನಾಯಕರೊಂದಿಗೆ ನಾಳೆ ಸಭೆ ನಡೆಸೋದಕ್ಕೆ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ. ಎಲ್ಲಾ ಪ್ರಮುಖ ನಾಯಕರ ಅಭಿಪ್ರಾಯ ಪಡೆಯಲಿದ್ದಾರೆ. ನವೆಂಬರ್ ತಿಂಗಳಾಂತ್ಯದೊಳಗೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ನಾಯಕರ ಮತ್ತೊಂದು ಯಾತ್ರೆ ಶುರುವಾಗಲಿದೆ. ಐಕ್ಯತಾಯಾತ್ರೆಯನ್ನ ಮುಂದುವರೆಸಿಕೊಂಡು ಹೋಗ್ತೀವಿ ಅಂತಾ ಡಿ.ಕೆ ಶಿವಕುಮಾರ್ ಮುನ್ಸೂಚನೆ ಕೊಟ್ಟಿದ್ದಾರೆ.

ರಥಯಾತ್ರೆ ಮೂಲಕ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ಠಕ್ಕರ್ ಕೊಡಲು ಕಾಂಗ್ರೆಸ್‌ ಪಾಳಯ ತಯಾರಿ ಮಾಡಿಕೊಳ್ತಿದೆ. ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಯನ್ನ ಚಾಮರಾಜನಗರ, ಮಂಡ್ಯ, ತುಮಕೂರು, ಹಾಸನ, ಚಿತ್ರದುರ್ಗ, ರಾಯಚೂರಿನಲ್ಲಿ ನಡೆಸಲಾಯ್ತು. ಸುತ್ತಮುತ್ತಲಿನ ಜಿಲ್ಲೆಗಳ, ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರನ್ನ ಸೇರಿಸಲಾಗಿತ್ತು. ಅದೇ ಮಾದರಿಯಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ಯಾತ್ರೆ ನಡೆಸಿ, 224 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೂ ಭಾಗಿಯಾಗಿಸಲು ರೂಪುರೇಷೆ ತಯಾರಿ ಮಾಡ್ತಿದ್ದಾರೆ.
ಸರ್ಕಾರದಲ್ಲಿನ ಭ್ರಷ್ಟಾಚಾರ, 40% ಕಮಿಷನ್, ಸಚಿವರ ವೈಫಲ್ಯ, ಬೆಲೆ ಏರಿಕೆ, ಪಿಎಸ್ ಐ ಹಗರಣ, ಕೆಪಿಎಸ್ ಸಿ ಹಗರಣ ಸೇರಿದಂತೆ ಪ್ರಮುಖ ವಿಚಾರಗಳನ್ನ ಅಸ್ತ್ರಗಳಾಗಿ ಪ್ರಯೋಗ ಮಾಡೋದಕ್ಕೆ ತೀರ್ಮಾನ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನ ಮತ್ತೊಂದು ಯಾತ್ರೆಗೆ ಬಿಜೆಪಿ ವ್ಯಂಗ್ಯಮಾಡಿದೆ.

ಒಟ್ನಲ್ಲಿ ರಾಜ್ಯ ರಾಜಕಾರಣದಲ್ಲಿ ಎದ್ದಿರೋ ಯಾತ್ರೆ ಅಲೆಯನ್ನು ನೋಡಿದ್ರೆ, ಸಾರ್ವತ್ರಿಕ ಚುನಾವಣೆಯಲ್ಲಿ ಘಟಾನುಘಟಿಗಳ ನಡುವೆ ನೆಕ್ ಟು ನೆಕ್ ಫೈಟ್ ನಡೆಯೋದ್ರಲ್ಲಿ ಎರಡು ಮಾತಿಲ್ಲ. ರಾಜ್ಯ ಬಿಜೆಪಿಗೆ ಮೋದಿ, ಯಡಿಯೂರಪ್ಪ ಹುಮ್ಮಸ್ಸು ಕೊಡ್ತಿದ್ರೆ, ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ನಡೆಸಿ, ರಾಜ್ಯ ಕಾಂಗ್ರೆಸ್‌ಗೆ ಬೂಸ್ಟ್ ಕೊಟ್ಟಿದ್ದಾರೆ. ಮುಂದಿನ ತಿಂಗಳಿಂದ ರಾಜ್ಯ ನಾಯಕರೆಲ್ಲಾ ಯಾತ್ರೆಗಳಲ್ಲೇ ಬ್ಯುಸಿಯಾಗೋದ್ರಲ್ಲಿ ಡೌಟಿಲ್ಲ.

RELATED ARTICLES

Related Articles

TRENDING ARTICLES