Monday, December 23, 2024

SC/ST ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ..!

ಬೆಂಗಳೂರು : ಸರ್ಕಾರದ ಎಸ್ಸಿ, ಎಸ್ಟಿ ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಂಪುಟದಲ್ಲಿ ಒಪ್ಪಿ ಕಳುಹಿಸಿದ್ದ ಸುಗ್ರೀವಾಜ್ಞೆಗೆ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಈ ಮೂಲಕ ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿ ಸಿಎಂ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ. ಇದ್ರ ಸಂಪೂರ್ಣ ಕ್ರೆಡಿಟ್ ಸರ್ಕಾರ ಅನ್ನುವುದಕ್ಕಿಂತ ಹೆಚ್ಚಾಗಿ ಸಿಎಂ ಬೊಮ್ಮಾಯಿಯವರಿಗೇ ಸಲ್ಲಬೇಕಾಗುತ್ತದೆ. ಯಾಕಂದ್ರೆ ಹಿಂದಿನ ಯಾವ ಮುಖ್ಯಮಂತ್ರಿಗಳೂ ಸಹ ಇದರ ಹತ್ತಿರನೂ ಹೋಗಿರಲಿಲ್ಲ. ಒಂದು ಹಂತದಲ್ಲಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿಎಂ ಕುಮಾರಸ್ವಾಮಿ ನ್ಯಾ.ನಾಗಮೋಹನ್ ದಾಸ್ ಅವರ ಕಮಿಟಿ ರಚಿಸಿದ್ದರು. ಆದ್ರೆ ನಂತರ ಬಂದ ಯಡಿಯೂರಪ್ಪನವರು ಒತ್ತಡ ಹೆಚ್ಚಾದ್ರೂ ಉಸಾಬರಿಗೆ ಹೋಗಲಿಲ್ಲ. ಎಲ್ಲಿ ಕೈ ಹಾಕಿ ಹೆಸರು ಕೆಡಿಸಿಕೊಳ್ಳಬೇಕೋ ಎಂದು ಸುಮ್ಮನಾಗಿದ್ರು. ಆದ್ರೆ, ಸಿಎಂ ಬೊಮ್ಮಾಯಿ ಮಾತ್ರ ಒಂದು ಕೈ ನೋಡಿಯೇ ಬಿಡೋಣವೆಂದು ಜೇನುಗೂಡಿಗೆ ಕಲ್ಲು ಹೊಡೆದಿದ್ರು. ಯಾವ ಹುಳಗಳೂ ಕಡಿಯಲಿಲ್ಲ. ಹೀಗಾಗಿ ಜೇನನ್ನು ಸಂಗ್ರಹಿಸಿ ಎಸ್ಸಿ,ಎಸ್ಟಿ ಸಮುದಾಯಗಳಿಗೆ ನೀಡಿದ್ದಾರೆ. ಹೊರ ರಾಜ್ಯದ ಪ್ರವಾಸದಲ್ಲಿದ್ದ ರಾಜ್ಯಪಾಲರನ್ನು ಭಾನುವಾರ ಭೇಟಿ ಮಾಡಿದ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ರಾಜ್ಯಪಾಲರ ಸಹಿ ಪಡೆದು ಅನುಮೋದನೆ ಪಡೆದ್ರು.

SC/ST ವಿಚಾರದಲ್ಲಿ ಪ್ರಸ್ತುತ ಸಿಎಂ ಬೊಮ್ಮಾಯಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ.. ಕ್ಯಾಬಿನೆಟ್ ನಲ್ಲಿ ಸುಗ್ರೀವಾಜ್ಞೆ ತಂದು ರಾಜ್ಯಪಾಲರ ಅಂಕಿತ ಹಾಕಿಸಿದ್ದಾರೆ.. ಹಾಗಾಗಿ ಸುಗ್ರೀವಾಜ್ಞೆ ಮೂಲಕ ತಂದ ಕಾನೂನು ಅಲ್ಪಾಯು. ಕೇವಲ ಆರು ತಿಂಗಳವರೆಗೆ ಮಾತ್ರ ಇದ್ರ ವಾಯಿದೆ ಇರುತ್ತದೆ‌. ಹಾಗಾಗಿ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗೋಕೆ ಇನ್ನೂ ಹಲವು ಹಂತಗಳನ್ನು ತಲುಪಬೇಕಿದೆ. ಅಲ್ಲಿಯೂ ಅನುಮತಿ ಸಿಗಬೇಕಿದೆ.. ಆಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲು ಸಾಧ್ಯ. ಹಾಗಾಗಿ ಆರು ತಿಂಗಳವರೆಗೆ ಮಾತ್ರ ಈ ಕಾಯ್ದೆಗೆ ಜೀವ ಇರುತ್ತದೆ. ಅಲ್ಲಿಯವರೆಗೆ ಇದ್ರ ಲಾಭವನ್ನು ಆ ತಳ ಸಮುದಾಯಗಳು ಪಡೆಯಲು ಅವಕಾಶವಿದೆ.

ಯಾವುದೇ ಬಿಲ್ ಕಾಯ್ದೆಯಾಗಿ ಅನುಷ್ಠಾನಕ್ಕೆ ಬರಬೇಕಾದ್ರೆ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲೂ ಚರ್ಚೆಗೆ ಬರಬೇಕು. ಸಮಗ್ರ ಚರ್ಚೆಯ ನಂತರ ಒಪ್ಪಿಗೆ ಸಿಗಬೇಕು. ಆ ನಂತರ ರಾಜ್ಯಪಾಲರ ಅಂಕಿತಕ್ಕೆ ಕಳಿಸಬೇಕು. ಅಲ್ಲಿ ಅಂಕಿತ ಬಿದ್ದರೆ ಅದು ಕಾನೂನಾಗಿ ಜಾರಿಗೆ ಬರುತ್ತದೆ. ಆದ್ರೆ, ಮೀಸಲಾತಿಯಂತೆ ಕೆಲವೊಂದು ವಿಧೇಯಕಗಳು ಅನುಷ್ಠಾನವಾಗಬೇಕಾದ್ರೆ ರಾಜ್ಯ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು. ರಾಜ್ಯಪಾಲರ ಒಪ್ಪಿಗೆ ಸಿಗಬೇಕು. ಆನಂತರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆಯಾಗಬೇಕು.. ಅಲ್ಲಿ ಒಪ್ಪಿಗೆ ಪಡೆದು ರಾಷ್ಟ್ರಪತಿಗಳ ಅಂಕಿತ ಬೀಳಬೇಕು. ಹಾಗಾದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾಯ್ದೆ ಜಾರಿಗೆ ಬರುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ, ಸದನ ನಡೆಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಕೊವಿಡ್ ನಂಥಾ ಸಾಂಕ್ರಾಮಿಕದ ವೇಳೆ ಸುಗ್ರೀವಾಜ್ಞೆ ಮೂಲಕ ಬಿಲ್ ಅನ್ನು ಕಾಯ್ದೆಯನ್ನಾಗಿ ಅನುಷ್ಠಾನಕ್ಕೆ ತರಬಹುದು. ಆದ್ರೆ ಈಗ ಯಾವುದೇ ಹಂತದ ಪರಿಸ್ಥಿತಿಯಿಲ್ಲ. ಆದ್ರೆ, ಸದನದಲ್ಲಿ ಚರ್ಚಿಸದೆ ಸರ್ಕಾರ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಸಂಪುಟ ಸಭೆಯಲ್ಲಿ ಈ ಎಸ್ಸಿ,ಎಸ್ಟಿ ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ತಂದಿದೆ. ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಹಾಗಾಗಿ ಇದರ ಅವಧಿ ಆರು ತಿಂಗಳು ಇರುತ್ತೆ.. ಅಷ್ಟರೊಳಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಬೇಕು.. ಬಳಿಕ ಕೇಂದ್ರಕ್ಕೆ ಕಳುಹಿಸಿ ಅಲ್ಲಿಯೂ ಚರ್ಚೆಗೆ ಬರಬೇಕು. ಹೀಗಾಗಿ ಈ ಹಂತಗಳನ್ನು ದಾಟಿದರೆ ಮಾತ್ರ ಈ ಕಾಯ್ದೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ‌.

SCಗೆ 15 ರಿಂದ 17 ಹಾಗೂ STಗೆ 3 ರಿಂದ 7% ಮೀಸಲಾತಿ ಹೆಚ್ಚಳಕ್ಕೆ ಪ್ರತಿಪಕ್ಷಗಳು ಕೂಡ ಸಹಕಾರ ನೀಡಿವೆ. ಯಾರೂ ವಿರೋಧವನ್ನು ಮಾಡಿಲ್ಲ. ಹಾಗಾಗಿ ಸದನ ಕರೆದು ಚರ್ಚೆಗೆ ತಂದ್ರೂ ಅಲ್ಲೂ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಕಡಿಮೆ. ಯಾಕಂದ್ರೆ ದಲಿತ, ವಾಲ್ಮೀಕಿ ಮತಗಳ ಮೇಲೆ ಕಾಂಗ್ರೆಸ್, ಜೆಡಿಎಸ್ ಕಣ್ಣಿಟ್ಟಿವೆ. ಹೀಗಾಗಿ ವಿರೋಧ ಮಾಡಲ್ಲ. ಆದ್ರೆ, ಕೇಂದ್ರಕ್ಕೆ ಶಿಫಾರಸು ಮಾಡಿದಾಗ ಮಾಡಿದಾಗ ಅಲ್ಲಿ ಬೇರೆ ಪಕ್ಷಗಳು ಕೂಡ ಇರುತ್ತವೆ.. ಒಪ್ಪಬಹುದು ಇಲ್ಲವೇ ಒಪ್ಪದಿರಬಹುದು. ಮತ್ತೊಂದು ಕಡೆ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಮಾಡುವಂತಿಲ್ಲ ಎಂಬ ಸುಪ್ರೀಂ ತೀರ್ಪಿದೆ. ಇದನ್ನು ಮೀರಿ ಹೋಗುವಂತಿಲ್ಲ. ಇನ್ನು ಮೀಸಲಾತಿ ಹೆಚ್ಚಳಕ್ಕೆ ಇನ್ನಿತರ ಸಮುದಾಯಗಳ ಮೀಸಲಾತಿ ಕಡಿತ ಮಾಡಬೇಕು. ಯಾವ ಮೀಸಲಾತಿ ಕಡಿತ ಮಾಡಿದ್ದೇವೆಂದು ಸರ್ಕಾರ ಹೇಳಿಲ್ಲ. ಇನ್ನೊಂದು ಕಡೆ ತಮಿಳುನಾಡು ಬೇರೆ ರಾಜ್ಯಗಳಂತೆ ಶೇ.50 ಮೀರಿ ಮೀಸಲಾತಿ ಕೊಟ್ಟಿದ್ಯಾ ಅನ್ನೋದು ಗೊತ್ತಿಲ್ಲ. ಯಾಕಂದ್ರೆ, ಈಗಾಗಲೇ ತಮಿಳುನಾಡು 69% ಮೀಸಲಾತಿ ಕೊಟ್ಟಿದ್ದರಿಂದ ಸುಪ್ರೀಂನಲ್ಲಿ ಸ್ಟೇ ಇದೆ. ಹೀಗಾಗಿ‌ ಸರ್ಕಾರ ಇದ್ರ ಬಗ್ಗೆ ಸರಿಯಾದ ಮಾಹಿತಿ ಒದಗಿಸಿಲ್ಲ‌. ಇದು ಎಲ್ಲಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಒಟ್ಟಿನಲ್ಲಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಸಿಎಂ ಬೊಮ್ಮಾಯಿ ಹೆಚ್ಚಳ ಮಾಡಿ ಮೊದಲ ಹಂತದಲ್ಲೇ ಯಶಸ್ವಿಯಾಗಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲು ಹಲವು ಹಂತಗಳನ್ನು ದಾಟಬೇಕಿದೆ. ಹೀಗಾಗಿ ಮುಂದೆ ಯಾವ ನಡೆ ಅನುಸರಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ರೂಪೇಶ್ ಪೂಜಾರಿ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES