ಬೆಂಗಳೂರು : ದೀಪಾವಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡೋದು ಹಣತೆಗಳಾದರೂ, ಪಟಾಕಿ ಸದ್ದಿಲ್ಲದಿದ್ದರೆ ಹಬ್ಬ ಕಳೆಗಟ್ಟಲ್ಲ. ಬೆಂಗಳೂರಿನಲ್ಲಿ ಹಸಿರು ಪಟಾಕಿಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದರೂ, ವ್ಯಾಪಾರಿಗಳು ಮಾತ್ರ ಎಲ್ಲ ಬಗೆಯ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದಾರೆ. ರಾಜಾಜಿನಗರದ ರಾಮಮಂದಿರ ಮೈದಾನ, ಜೆಪಿ ಪಾರ್ಕ್ ಮೈದಾನ, ಯಲಹಂಕ ಸೇರಿದಂತೆ ಹಲವು ಮೈದಾನಗಳಲ್ಲಿ ಪಟಾಕಿ ಸ್ಟಾಲ್ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿ ಮೈದಾನದಲ್ಲಿ 25ಕ್ಕೂ ಹೆಚ್ಚು ಸ್ಟಾಲ್ಗಳಿದ್ದು ಗ್ರಾಹಕರು ಯಥೇಚ್ಛವಾಗಿ ಪಟಾಕಿ ಕೊಂಡು ದೀಪಾವಳಿ ಆಚರಿಸಿದರು.
ಈ ಬಾರಿ ಗ್ರಾಹಕರಿಂದ ಬೇಡಿಕೆ ಇದ್ದರೂ, ಪೂರೈಕೆ ಇಲ್ಲದ ಕಾರಣ ಹೆಚ್ಚಿನ ವ್ಯಾಪಾರಿಗಳಿಗೆ ತಲೆಬಿಸಿಯಾಗಿದೆ. ಕಳೆದ ಬಾರಿ ಕೊವಿಡ್ ಇದ್ದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟಕ್ಕೆ ಅಂತಿಮ ಕ್ಷಣದವರೆಗೂ ಅನುಮತಿ ನೀಡಿರಲಿಲ್ಲ. ಈ ಬಾರಿಯೂ ಅದೇ ಅನುಮಾನದಿಂದ ಪಟಾಕಿಗಳಿಗೆ ಮೊದಲೇ ಆರ್ಡರ್ ನೀಡಿರಲಿಲ್ಲ. ಇದರಿಂದ ಪೂರೈಕೆಯಲ್ಲಿ ಶೇಕಡಾ 30-40ರಷ್ಟು ವ್ಯತ್ಯಯವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು. ಜೊತೆಗೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಪಟಾಕಿಗಳ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.
ಬೆಂಗಳೂರಲ್ಲಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಈ ನಿಯಮವನ್ನು ಮಾರಾಟಗಾರರು ಪಾಲನೆ ಮಾಡುತ್ತಿಲ್ಲ. ಹೆಚ್ಚು ಶಬ್ದ, ಹೊಗೆಸೂಸುವ ಮಾಲಿನ್ಯ ಪಟಾಕಿಗಳನ್ನೂ ಮಾರಾಟ ಮಾಡಲಾಗುತ್ತಿದೆ.. ಗ್ರಾಹಕರು ಈ ಪಟಾಕಿಗಳಿಗೆ ಹೆಚ್ಚಿನ ಮೊರೆ ಹೋಗುತ್ತಿದ್ದಾರೆ. ಮತ್ತೊಂದು ಕಡೆ ಎಲ್ಲೆಡೆ ಹಣತೆಗಳ ಮಾರಾಟ ಕೂಡ ಫುಲ್ ಜೋರಾಗಿತ್ತು. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಸೇರಿದಂತೆ ಎಲ್ಲೆಡೆ ರಾಜಸ್ಥಾನ ಮೂಲಕದ ಮಣ್ಣಿನ ದೀಪಗಳನ್ನು ಮಾರಾಟ ಮಾಡಲಾಯಿತು.
ಸ್ವಾತಿ ಪುಲಗಂಟಿ, ಮೆಟ್ರೋ ಬ್ಯುರೋ, ಪವರ್ ಟಿವಿ