Wednesday, January 22, 2025

ಭಾರತ್ ಜೋಡೊ ಯಾತ್ರೆಯಲ್ಲಿ ಕಾಣಿಸದ ರಮ್ಯಾ..!

ರಾಯಚೂರು : ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿ 22 ದಿನಗಳನ್ನು ಪೂರೈಸಿ ತನ್ನ ಪಯಣವನ್ನು ಮುಕ್ತಾಯಗೊಳಿಸಿದೆ. ಆದರೆ, ಇಲ್ಲಿ ಗಮನಾರ್ಹ ಎಂದರೆ, ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದ ನಟಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ತಮ್ಮದೇ ಜಿಲ್ಲೆಯ ಮಂಡ್ಯದಲ್ಲೂ ಅವರೆಲ್ಲೂ ಕಾಣಿಸಿಕೊಂಡಿರಲಿಲ್ಲ. ಶನಿವಾರವಷ್ಟೇ ರಾಯಚೂರಿನಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದರು. ರಮ್ಯಾ ಅವರ ಈ ನಡೆ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದೆ.ಶನಿವಾರ ಸಂಜೆ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ ರಮ್ಯಾ, ಬಳಿಕ ಕಾರ್ನರ್ ಮೀಟಿಂಗ್ ವೇಳೆ ಸ್ಟೇಜ್ ಹತ್ತಿದ್ರು. ಆದ್ರೆ, ಗೆಸ್ಟ್ ಲಿಸ್ಟ್‌ನಲ್ಲಿ ಹೆಸರಿಲ್ಲದ ಕಾರಣ ರಮ್ಯಾಗೆ ಎಂಟ್ರಿ ಕೊಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದ್ದರು.ಸ್ಟೇಜ್‌ನಲ್ಲಿ ಕೂರಲು ಅವಕಾಶ ನಿರಾಕರಿಸಿದ್ದರು.ಇದರಿಂದ ಕೆರಳಿ ಕೆಂಡವಾದ ನಟಿ, ಭದ್ರತಾ ಸಿಬ್ಬಂದಿ ಹಾಗೂ ರಾಯಚೂರಿನ ಕೈ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದಾಗ್ಯೂ ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದ್ರು..ಆಗ ಆಕ್ರೋಶಗೊಂಡು ಕೆಲ ಹೊತ್ತು ಓಡಾಡಿದ ನಟಿ, ಕೊನೆಗೂ ಕೋಪಗೊಂಡು ಹೊರಟು ಹೋಗಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದೆಡೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿರುವ ಕಾಂಗ್ರೆಸ್ ನೇರವಾಗಿ ಜನರ ಮುಂದೆಯೇ ಶಕ್ತಿ ಪ್ರದರ್ಶನ ಮಾಡ್ತಿದೆ. ಭಾರತ್ ಜೋಡೊ ಯಾತ್ರೆ ಅನ್ನೋ ಹೊಸ ಬೂಸ್ಟರ್ ಡೋಸ್‌ನಿಂದ ಕೈ ಪಾಳೆಯದಲ್ಲಿ ಹೊಸ ಹುಮ್ಮಸ್ಸು ಚಿಗುರೊಡೆದಿದೆ. ಖುದ್ದು ರಾಹುಲ್ ಗಾಂಧಿಯೇ ಅಖಾಡಕ್ಕಿಳಿದು ಕನ್ಯಾಕುಮಾರಿಯಿಂದ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳ ಮೂಲಕ ಕಾಶ್ಮೀರವರೆಗೆ ಈ ಯಾತ್ರೆ ಸಾಗುತ್ತಿದ್ದು, ರಾಜ್ಯದಲ್ಲಿ ಯಶಸ್ವಿಯಾಗಿ 22 ದಿನಗಳನ್ನು ಪೂರೈಸಿ ರಾಯಚೂರಿನಲ್ಲಿ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಸುಮಾರು 500 ಕಿಲೋ ಮೀಟರ್‌ ದೂರ ಕ್ರಮಿಸಿದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಹೆಜ್ಜೆ ಹೆಜ್ಜೆಗೂ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದು ರಾಜ್ಯದ ಕಾಂಗ್ರೆಸ್ ನಾಯಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

ಇತ್ತ ರಾಯಚೂರು ಜಿಲ್ಲೆಯೊಂದರಲ್ಲೇ ಭಾರತ್ ಜೋಡೊ ಯಾತ್ರೆ ಮೂರು ದಿನಗಳ ಕಾಲ ನಡೀತು.. ರಾಹುಲ್ ಗಾಂಧಿ ಮಂತ್ರಾಲಯದ ರಾಯರ ದರ್ಶನ ಪಡೆದು ಯಾತ್ರೆ ಶುರು ಮಾಡಿದ್ರು. ಅತ್ಯದ್ಭುತ ಜನ ಬೆಂಬಲ ವ್ಯಕ್ತವಾಯ್ತು. ಕ್ರೌಡ್ ಕಂಟ್ರೋಲ್ ಮಾಡೋಕೆ ಪೊಲೀಸರು ಹರಸಾಹಸ ಪಡುವಂತಾಯಿತು. ಭಾನುವಾರ ರಾಹುಲ್‌ ಗಾಂಧಿ ಅಭಿಮಾನಿಯೊಬ್ಬರ ಚಿಕ್ಕ ಮಗುವನ್ನ ಎತ್ತಿಕೊಂಡು ರಾಹುಲ್ ಗಾಂಧಿ ಮುದ್ದಾಡಿದ್ರು. ಚಿಕ್ಕಸುಗೂರು,ದೇವಸುಗೂರು,ಶಕ್ತಿನಗರ ಮಾರ್ಗವಾಗಿ ಕೃಷ್ಣಾ ನದಿ ಬ್ರಿಡ್ಜ್ ಮೂಲಕ ತೆಲಂಗಾಣಕ್ಕೆ ಭಾರತ್ ಜೋಡೊ ಯಾತ್ರೆ ಶಿಫ್ಟ್ ಆಯ್ತು. ಈ ವೇಳೆ ರಾಜ್ಯ ನಾಯಕರು ರಾಷ್ಟ್ರ ಧ್ವಜವನ್ನ ತೆಲಂಗಾಣ ಕಾಂಗ್ರೆಸ್ ಮುಖಂಡರಿಗೆ ನೀಡಿ ರಾಹುಲ್ ಗಾಂಧಿಗೆ ಸೆಂಡ್ ಆಫ್ ಮಾಡಿದ್ರು.

ಸದ್ಯ ರಾಜ್ಯದಿಂದ ಭಾರತ್ ಜೋಡೊ ಯಾತ್ರೆ ತೆಲಂಗಾಣ ತಲುಪಿದ್ದು, ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದ್ದು, ಇದು ಕೈ ಪಾಳೆಯಕ್ಕೆ ಹೊಸ ಹುರುಪು ನೀಡಿದ್ದಂತೂ ಸುಳ್ಳಲ್ಲ.

ಸಿದ್ದು ಬಿರಾದಾರ್ ಪವರ್ ಟಿವಿ ರಾಯಚೂರು

RELATED ARTICLES

Related Articles

TRENDING ARTICLES