Monday, December 23, 2024

ಕಾಂಗ್ರೆಸ್ ತೊರೆದು ದಳ ಸೇರ್ತಾರಾ ಕೆಜಿಎಫ್ ಬಾಬು..?

ಬೆಂಗಳೂರು : ಸಾವಿರಾರು ಕೋಟಿ ಇದ್ರೂ ರಾಜಕೀಯವಾಗಿ ಇನ್ನೂ ನೆಲೆ ಕಾಣದ ಕೆಜಿಎಫ್ ಬಾಬು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗೋ ಸಾಧ್ಯತೆಗಳು ದಟ್ಟವಾಗಿವೆ. ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದೇ ಘೋಷಿಸಿಕೊಂಡಿರುವ ಕೆಜಿಎಫ್ ಬಾಬು, ಇತ್ತೀಚೆಗೆ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಆರ್.ವಿ.ದೇವರಾಜ್ ಹಾಗೂ ಕೆಜಿಎಫ್ ಬಾಬು ನಡುವಿನ ಜಟಾಪಟಿಯೇ ಇದಕ್ಕೆ ಪ್ರಮುಖ ಕಾರಣ. ಚಿಕ್ಕಪೇಟೆಯಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸಲು ಆರ್.ವಿ.ದೇವರಾಜ್ ಸರ್ಕಸ್ ನಡೆಸ್ತಿದ್ದಾರೆ. ಆದ್ರೆ, ಕೆಜಿಎಫ್ ಬಾಬು, ನಾನೇ ಅಭ್ಯರ್ಥಿ ಎಂದು ಪ್ರಚಾರಕ್ಕೆ ಇಳಿದು ಬಿಟ್ಟಿದ್ದಾರೆ. ಮನೆಮನೆಗೆ ಐದು ಸಾವಿರ ರೂಪಾಯಿಯಂತೆ ಆರ್ಥಿಕ ನೆರವನ್ನು ಕೊಡೋದಲ್ಲದೇ, ಮೂರು ಸಾವಿರ ಮನೆಗಳನ್ನು ನಿರ್ಮಿಸಿ, ಬಡವರಿಗೆ ಕೊಡ್ತೇನೆ ಎಂದು ಅಬ್ಬರದ ಪ್ರಚಾರ ಪಡೆಯುತ್ತಿದ್ದಾರೆ. ಇದೇ ಅಲ್ಲದೇ 350 ಕೋಟಿ ನೀಡ್ತೇನೆ ಎಂದು ಕೈ ನಾಯಕರಿಗೆ ಬಹಿರಂಗವಾಗಿಯೇ ಹೇಳಿದ್ದಾರೆ.

ಪಕ್ಷದ ಅನುಮತಿ ಇಲ್ಲದೇ ಈ ಚಟುವಟಿಕೆಗಳಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವ್ರಿಗೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು. ಹಣ ಹಂಚುತ್ತಿದ್ದಾರೆ, ಮನೆ ಕಟ್ಟಿಸಿಕೊಡುವ ಆಮಿಷ ಒಡ್ಡುತ್ತಿದ್ದಾರೆಂದು ಆರ್.ವಿ.ದೇವರಾಜ್ ಬೆಂಬಲಿಗರು ಪೊಲೀಸ್ ಠಾಣೆಗೂ ದೂರು ಕೊಟ್ಟಿದ್ದಾರೆ‌. ಈ ಎಲ್ಲಾ ವಿಚಾರಗಳಿಂದ ಕೆಜಿಎಫ್ ಬಾಬು ಸ್ವಲ್ಪ ಸೈಲೆಂಟ್ ಆಗಿ, ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸಮುದಾಯದ ಕೆಜಿಎಫ್ ಬಾಬುರನ್ನು ಸೆಳೆಯಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅಖಾಡಕ್ಕಿಳಿದಿದ್ದಾರೆ.

ಇಂದು ಮಧ್ಯಾಹ್ನ ವಸಂತನಗರದಲ್ಲಿರೋ ಕೆಜಿಎಫ್ ಬಾಬು ನಿವಾಸಕ್ಕೆ ಸಿ.ಎಂ ಇಬ್ರಾಹಿಂ ಭೇಟಿ ಕೊಟ್ಟು ಮಾತುಕತೆ ನಡೆಸಿದ್ರು. ಜೆಡಿಎಸ್ ಪಕ್ಷಕ್ಕೆ ಬನ್ನಿ, ನಿಮಗೆ ಒಳ್ಳೆ ಭವಿಷ್ಯವಿದೆ ಅಂತಾ ಆಹ್ವಾನಿಸಿದ್ರು. ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎಂ ಇಬ್ರಾಹಿಂ, ನಾನು ಅವ್ರನ್ನ ಪಕ್ಷಕ್ಕೆ ಸ್ವಾಗತ ಮಾಡಿದ್ದೀನಿ. ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದೇವೆ ಎಂದ್ರು‌‌. ನಾವು ರೋಲ್ಸ್ ರಾಯ್ ಕಾರಲ್ಲಿ ಬನ್ನಿ ಅಂತಾ ಕರೆಯಲ್ಲ. ನಾವು ಓಡಾಡೋದು ಆಟೋ ರಿಕ್ಷಾದಲ್ಲಿ. ಆಟೋದಲ್ಲಿ ಬನ್ನಿ ಅಂತಾನೇ ಹೇಳ್ತೀನಿ ಎಂದ್ರು.

ಹದಿನೈದು ದಿನಗಳೊಳಗೆ ನಿರ್ಧಾರ ತಿಳಿಸೋದಾಗಿ ಕೆಜಿಎಫ್ ಬಾಬು ಹೇಳಿದ್ದಾರೆ. ಚಿಕ್ಕಪೇಟೆ ಕ್ಷೇತ್ರ ನಮ್ಮಪ್ಪನ ಕ್ಷೇತ್ರ.. ನಮ್ಮ ತಂದೆ ತಾತ ಎಲ್ಲಾ ಕಾಂಗ್ರೆಸ್‌ನವ್ರು. ಇಡೀ ಭಾರತದಲ್ಲಿ 350 ಕೋಟಿ ಕೊಡೋರು ಯಾರಾದ್ರೂ ಇದ್ದಾರಾ..? ನಾನು ಚಿಕ್ಕಪೇಟೆ ಕ್ಷೇತ್ರದ ಜನರ ಋಣ ತೀರಿಸಬೇಕಿದೆ ಅಂತಾ ಕೆಜಿಎಫ್ ಬಾಬು ಹೇಳಿದ್ರು. ಕಾಂಗ್ರೆಸ್‌ನಲ್ಲಿ ನಾಲ್ಕು ಮಂದಿ ಆರ್ ಎಸ್ ಎಸ್ ನವ್ರು ಇದ್ದಾರೆ. ಅವ್ರ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ರು.

ಕೆಜಿಎಫ್ ಬಾಬುರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನದ ಹಿಂದೆ ದಳಪತಿಗಳ ಮಾಸ್ಟರ್ ಪ್ಲ್ಯಾನ್ ಇದೆ. ಅಲ್ಪಸಂಖ್ಯಾತ ಮುಖಂಡ ಕೆಜಿಎಫ್ ಬಾಬು ಮೂಲಕ ಜಮೀರ್ ಅಹ್ಮದ್‌ಗೆ ಟಕ್ಕರ್ ಕೊಡುವ ಯೋಚನೆಯೂ ಇದೆ. ಪಕ್ಷಕ್ಕೂ ಆರ್ಥಿಕವಾಗಿ ಅನುಕೂಲವಾಗಲಿದೆ. ಹೀಗಾಗಿಯೇ ದಳಪತಿಗಳು ಕೆಜಿಎಫ್ ಬಾಬುಗೆ ಗಾಳ ಹಾಕಿದ್ದಾರೆ. ಅದೇನೇ ಇದ್ರೂ ಕೆಜಿಎಫ್ ಬಾಬು ನಡೆ ಬಹಳ ಕುತೂಹಲ ಉಂಟು ಮಾಡಿದೆ. ಆ ಕಡೆ ಕಾಂಗ್ರೆಸ್ ಪಕ್ಷ ಟಿಕೆಟ್ ಖಚಿತಪಡಿಸಿಲ್ಲ‌‌‌. ಆದ್ರೂ ಕೆಜಿಎಫ್ ಬಾಬು ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಚಿಕ್ಕಪೇಟೆಯಲ್ಲಿ ಓಡಾಡುತ್ತಿದ್ದಾರೆ. ಒಂದ್ವೇಳೆ ಟಿಕೆಟ್ ಸಿಗದಿದ್ರೆ, ಕೈ ಬಿಟ್ಟು ತೆನೆ ಹಿಡಿಯೋದ್ರಲ್ಲಿ ಅನುಮಾನವೇ ಇಲ್ಲ.

ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ

RELATED ARTICLES

Related Articles

TRENDING ARTICLES