ವಿಜಯಪುರ; ಶಾಲಾ ಮಕ್ಕಳಿಗೆ ಪೂರೈಕೆ ಮಾಡುವ ಬಿಸಿಯೂಟದ ಅಕ್ಕಿ ಸೇರಿದಂತೆ ಸಾಮಾಗ್ರಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಒಂದು ಜಿಲ್ಲಾ ಪೋಲಿಸರಿಗೆ ಸಾಕಷ್ಟು ತಲೆನೋವಾಗಿ ಮಾರ್ಪಟ್ಟಿತ್ತು. ಈ ಕೇಸ್ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೋಲಿಸರು ಗ್ಯಾಂಗ್ನ್ನು ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲೆಯಲ್ಲಿ 13 ಪ್ರಕರಣಗಳಲ್ಲಿ ಎಂಟು ಜನ ಆರೋಪಿತರ ಗ್ಯಾಂಗ್ ಬಿಸಿಯೂಟದ ಅಕ್ಕಿ ಇತರೆ ಸಾಮಗ್ರಿಗಳ ಕಳ್ಳತನದಲ್ಲಿ ಭಾಗಿಯಾಗಿದ್ದರು. ಇವರು ಬಿಸಿಯೂಟದ ಅಕ್ಕಿಯನ್ನೇ ಕಳ್ಳತನ ಮಾಡೋದು ದಂಧೆಯನ್ನಾಗಿ ಮಾಡಿಕೊಂಡಿದ್ದರು. ಶಾಲೆಗೆ ಅಕ್ಕಿ ಪೂರೈಸುತ್ತಿದ್ದವರು ಸಾಥ್ ನೀಡಿರೋದು ವಿಚಾರಣೆ ವೇಳೆ ಬಯಲಾಗಿದೆ.
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಜಿಲ್ಲಾ ಪೊಲೀಸ್ ವಿಶೇಷ ತಂಡ ರಚಿಸಿದ್ದರು. ಪ್ರಕರಣ ತನಿಖೆ ನಡೆಸಿದ ಆರೋಪಿಗಳನ್ನ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಕನ್ನಾಳ ಗ್ರಾಮದ ಖಾಸಗಿ ವಾಹನ ಶರತ್ ಭೀಮಾಶಂಕರ ದೊಡಮನಿ, ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಖಾಸಗಿ ವಾಹನ ಚಾಲಕ ಶ್ರೀಕಾಂತ ದೇವೆಂದ್ರಪ್ಪ ಕಟ್ಟಿಮನಿ, ಕೋರವಾರ ಗ್ರಾಮದ ಖಾಸಗಿ ವಾಹನ ಚಾಲಕ ಮಲ್ಲಿಕಾರ್ಜುನ ರಾಮಪ್ಪ ಮೋಪಗಾರ, ಬಬಲೇಶ್ವರ ತಾಲೂಕಿನ ಶೇಗುಣಶಿ ಗ್ರಾಮದ ಖಾಸಗಿ ವಾಹನ ಚಾಲಕ ಸಂತೋಷ ಜಗದೀಶ ಹೊಸಕೋಟಿ, ಕೋರವಾರ ಗ್ರಾಮದ ಖಾಸಗಿ ವಾಹನ ಚಾಲಕ ಸಂಜು ಮಾಳಪ್ಪ ಮ್ಯಾಗೇರಿ, ಕೋರವಾರ ಗ್ರಾಮದ ಖಾಸಗಿ ವಾಹನ ಚಾಲಕ ಸಚಿನ ಲಕ್ಷ್ಮಣ ಹುಣಶ್ಯಾಳ ಬಂಧಿತರು.
ಕಳ್ಳತನ ಮಾಡಿದ ಅಕ್ಕಿ ಖರೀದಿಸುತ್ತಿದ್ದ ಮಿಂಚನಾಳ ಗ್ರಾಮದ ರಾಹುಲ್ ಶಂಕರ ಪವಾರ, ವಿಜಯಪುರ ನಗರದ ಉಪ್ಪಲಿ ಬುರ್ಜ ಬಳಿಯ ನಾಗರಾಜ ಬಸವರಾಜ ಉಪ್ಪಿನ ಬಂಧಿಸಲಾಗಿದೆ.
ಇನ್ನೂ ಬಂಧಿತರು ಬುರಾಣಪುರ, ಇಟ್ಟಂಗಿಹಾಳ ಹಾಗೂ ಹಿಟ್ನಳ್ಳಿ ಬಬಲೇಶ್ವರ, ಸಿಂದಗಿ, ಆಲಮೇಲ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳಿಗೆ ವಿತರಿಸುವ ಬಿಸಿಯೂಟದ 50 ಕ್ವಿಂಟಾಲ್ ಅಕ್ಕಿ, ಎಣ್ಣೆ, ತೊಗರಿ ಬೇಳೆ 15 ಕ್ವಿಂಟಾಲ್, ಎರಡು ಮಿನಿ ಗೂಡ್ಸ್, ಒಂದು ಕ್ರೂಸರ್ ಸೇರಿದಂತೆ ಒಟ್ಟು 25 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿಜಯಪುರ ಹೆಚ್.ಡಿ.ಆನಂದಕುಮಾರ್ ಹೇಳಿದರು.
ಇನ್ನೂ ಬಂಧಿತ ಆರೋಪಿಗಳು ಸುಮಾರು 13 ಪ್ರಕರಣಗಳಲ್ಲಿ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದ್ದ ಆಹಾರವನ್ನು ಕದಿಯುತ್ತಿದ್ದರು. ಸದ್ಯ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ ಪೋಲಿಸರು ವಿಚಾರಣೆ ಕೈಗೊಂಡಿದ್ದು ಇನ್ನೂ ಬೇರೆ ಬೇರೆ ಯಾವುದಾದರೂ ಕಳ್ಳತನ ದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರಾ ಎಂಬುದು ತನಿಖೆಯಿಂದಲೇ ತಿಳಿದು ಬರಬೇಕಿದೆ.
ಸುನೀಲ್ ಭಾಸ್ಕರ, ಪವರ ಟಿವಿ. ವಿಜಯಪುರ