Wednesday, January 22, 2025

ವಿಶ್ವಕಪ್ ಹಣಾಹಣಿಗೆ ಕೌಂಟ್‌ಡೌನ್‌ ಶುರು

ಆಸ್ಟ್ರೇಲಿಯಾದಲ್ಲಿ ಈಗಾಗಲೇ ಆರಂಭಗೊಂಡಿರುವ ಟಿ-20 ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತು ಎನಿಸಿರುವ ಸೂಪರ್ -12 ರ ಸವಾಲಿಗೆ ಭಾರತ ತಂಡ ಸಜ್ಜಾಗಿದೆ. ಇದೇ ವೇಳೆ ಭಾರತ ತಂಡದ ಒಂದು ವಿಶೇಷತೆ ಬಗ್ಗೆ ಇಲ್ಲಿ ಹೇಳಲೇಬೇಕು. ಹೌದು, ಕಳೆದ ಹದಿನೈದು ವರ್ಷಗಳ ಹಿಂದೆ 2007 ರಲ್ಲಿ ಎಂಎಸ್ ಧೋನಿ ಸಾರಥ್ಯದ ಯುವ ಭಾರತ ತಂಡ ಹರಿಣಗಳ ನೆಲದಲ್ಲಿ ಎಲ್ಲರ ನಿರೀಕ್ಷೆಗಳನ್ನು ಮೀರಿ ಚೊಚ್ಚಲ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಬೆರಗು ಮೂಡಿಸಿದ್ದ ಆಟಗಾರ ಇದೀಗ ಭಾರತ ತಂಡವನ್ನು ಮುನ್ನೆಡೆಸುವ ಹೊಣೆ ಹೊತ್ತಿದ್ದಾರೆ. ಹಾಗೂ ಆ ನಾಯಕನಿಗೆ ಮಾರ್ಗದರ್ಶನ ನೀಡಲು ಕನ್ನಡಿಗ ಸಾಥ್ ನೀಡುತ್ತಿದ್ದಾರೆ.

ಹೌದು, ಅವರು ಮತ್ಯಾರು ಅಲ್ಲ, ಭಾರತ ತಂಡದ ಹಿಟ್​​​ ಮ್ಯಾನ್​​ ಅನಿಸಿಕೊಂಡಿರುವ ನಾಯಕ. ಅವರೇ ರೋಹಿತ್ ಶರ್ಮಾ. ಕಳೆದ ವರ್ಷದ ಟಿ-20 ವಿಶ್ವಕಪ್​​​ ಬಳಿಕ ಪೂರ್ಣ ಪ್ರಮಾಣದ ನಾಯಕರಾಗಿರುವ ರೋಹಿತ್​​​ ಶರ್ಮಾಗೆ ಇದು ಮೊದಲ ಐಸಿಸಿ ವಿಶ್ವಕಪ್‌ ಟೂರ್ನಿ, ಅದೇ ರೀತಿ ಕನ್ನಡಿಗ ರಾಹುಲ್​​ ದ್ರಾವಿಡ್​​​ ತಂಡದ ಮುಖ್ಯ ಕೋಚ್​​​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಟ್​​​ ಮ್ಯಾನ್​​​ ರೋಹಿತ್​​​ ಹಾಗೂ ಕನ್ನಡಿಗ ರಾಹುಲ್​​​ ದ್ರಾವಿಡ್​​​ಗೆ ಈ ಟೂರ್ನಿ ಅಗ್ನಿ ಪರೀಕ್ಷೆಯಾಗಿದ್ದು, 15 ವರ್ಷಗಳ ಬಳಿಕ ಭಾರತ ತಂಡಕ್ಕೆ ಟಿ-20 ವಿಶ್ವಕಪ್ ಗೆದ್ದುಕೊಡುವ ನಿರೀಕ್ಷೆಯ ಭಾರ ಈಗ ರೋಹಿತ್ ಶರ್ಮಾ ಹೆಗಲೇರಿದೆ.

ಕಳೆದ ವರ್ಷ ಅರಬ್ ನಾಡಿನಲ್ಲಿ ಭಾರಿ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಭಾರತ ತಂಡ ನಿರಾಸೆ ಅನುಭವಿಸಿತ್ತು. ಕಳೆದ ಏಷ್ಯಾಕಪ್‌ನಲ್ಲಿ ನಿರಾಸೆ ಅನುಭವಿಸಿದ್ದರೂ, ನಂತರ ತವರಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಭಾರತ ತಂಡ ಕಾಂಗರೂ ನೆಲದಲ್ಲಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಎಂ ಎಸ್ ಧೋನಿ ಅವರನ್ನು ಮೆಂಟರ್ ಆಗಿ ಹೊಂದಿದ್ದ ತಂಡ ಕನಿಷ್ಠ ನಾಕೌಟ್ ಹಂತಕ್ಕೂ ಏರಲಾಗದೆ ವೈಫಲ್ಯ ಅನುಭವಿಸಿತ್ತು. ಆದರೆ ಈ ಬಾರಿ ಆ ತಪ್ಪುಗಳಿಂದ ರೋಹಿತ್​​ ಪಡೆ ಪಾಠ ಕಲಿಯಬೇಕಿದೆ.

ಇತ್ತ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಐಸಿಸಿ ಟೂರ್ನಿಗಳಲ್ಲಿ ಅದೃಷ್ಟವಿರಲಿಲ್ಲ ಅಂತಾನೆ ಹೇಳಬಹುದು. ಆದರೆ ರೋಹಿತ್ ಶರ್ಮಾ ಸಾರಥ್ಯದಲ್ಲಿ ಭಾರತ ತಂಡ ಹಿಂದಿನ ಸಾಮರ್ಥ್ಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಮುಂಬೈ ಇಂಡಿಯನ್ಸ್ ನಾಯಕರಾಗಿ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ನಾಯಕತ್ವದ ಮೇಲೂ ಈ ಬಾರಿ ಹಲವು ವಿಶೇಷ ನಿರೀಕ್ಷೆಗಳಿವೆ. ಹಿಟ್​​​ ಮ್ಯಾನ್​​​​ ರೋಹಿತ್​​​​ಗೆ ನಾಯಕರಾಗಿ ಇದು ಮೊದಲ ಐಸಿಸಿ ಟೂರ್ನಿಯಾಗಿದ್ದರೂ, ಗೆಲುವಿನ ಅಭ್ಯಾಸದ ಬಲ ಇವರಿಗಿದೆ.

ಒಟ್ಟಾರೆ ರೋಹಿತ್ ಪಾಲಿಗೆ ಇದು 8ನೇ ವಿಶ್ವಕಪ್ ಆಗಿದ್ದು, ರೋಹಿತ್ ಬಳಗದಲ್ಲಿ ಪ್ರತಿಭಾನ್ವಿತ, ಅನುಭವಿ, ಉತ್ಸಾಹಿ ಆಟಗಾರರಿದ್ದಾರೆ, ಕನ್ನಡಿಗ ರಾಹುಲ್ ದ್ರಾವಿಡ್​​​ ಹಾಗೂ ಹಿಟ್​​ ಮ್ಯಾನ್​ ರೋಹಿತ್​​​ಗೆ ಮೊದಲ ಹಂತದ ಅಗ್ನಿಪರೀಕ್ಷೆಯಾಗಿದೆ, ಮುಂಬರುವ 2023ರ ಅಕ್ಟೋಬರ್​​​- ನವೆಂಬರ್​​ ನಲ್ಲಿ ತವರು ನೆಲದಲೇ ನಡೆಯಲಿರು​​ವ ಏಕದಿನ ವಿಶ್ವಕಪ್​​​ಗೆ ಈ ಜೋಡಿಗೆ ಇದು ಮೊದಲ ಸವಾಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಕುದಾನ್​​ ಸಾಬ್, ನ್ಯೂಸ್​​ ಡೆಸ್ಕ್​,​​​ ಪವರ್​​ ಟಿವಿ

RELATED ARTICLES

Related Articles

TRENDING ARTICLES