Wednesday, January 22, 2025

ಮತ್ತೆ ಮುನ್ನೆಲೆಗೆ ಬಂದ ಸಂಪುಟ ವಿಸ್ತರಣೆಯ ಪ್ರಹಸನ ..!

ಬೆಂಗಳೂರು : ಕಳೆದ ಮೂರು ತಿಂಗಳ ಹಿಂದೆ ಸಂಪುಟ ವಿಸ್ತರಣೆಯ ಕೂಗು ಬಹಳ ವೇಗವಾಗಿ ಓಡಾಡಿತ್ತು. ಸಚಿವ ಸ್ಥಾನದ ಕನಸು ಕಂಡವರು ಹಿರಿಯ ನಾಯಕರ ಮನೆಬಾಗಿಲಿಗೂ ಎಡತಾಕಿದ್ದರು. ಕೆಲವರು ಹೈಕಮಾಂಡ್ ಬೆನ್ನಿಗೆ ಬಿದ್ರೆ,ಇನ್ನುಳಿದವರು ನಾಗಪುರದ ಆರ್ ಎಸ್ ಎಸ್ ನಾಯಕರ ಹಿಂದೆ ಬಿದ್ದಿದ್ರು. ಹೊಸದಾಗಿ ಸೂಟು ಬೂಟು ಹೊಲೆಸಿಕೊಂಡು ಜೋಶಾಗಿ ಓಡಾಡ್ತಿದ್ರು. ಆದ್ರೆ, ಸಂಪುಟ ವಿಸ್ತರಣೆಯೂ ಆಗ್ಲಿಲ್ಲ..ಪುನಾರಚನೆಯೂ ಆಗ್ಲಿಲ್ಲ. ಸಿಎಂ ಹಲವು ಬಾರಿ ದೆಹಲಿಗೆ ಹೋಗಿ ಬಂದ್ರೂ ಹೈಕಮಾಂಡ್ ಒಪ್ಪಿಗೆಯನ್ನೂ ಕೊಡ್ಲಿಲ್ಲ..ಅಥವಾ ಹೈಕಮಾಂಡ್‌ನ ಒಪ್ಪಿಸುವ ಕೆಲಸವನ್ನು ಸಿಎಂ ಬೊಮ್ಮಾಯಿಯವರೇ ಮಾಡಲಿಲ್ವೋ‌ ಗೊತ್ತಿಲ್ಲ.. ಅಂತೂ ವಿಸ್ತರಣೆ ಅನ್ನೋದು ಅಲ್ಲೇ ಮೂಲೆಗೆ ಬಿತ್ತು. ಸೂಟು ಬೂಟು ಹೊಲೆಸಿಕೊಂಡವರು ಬಹಳ ಬೇಸರದಿಂದಲೇ ಗೂಟಕ್ಕೆ ನೇತು ಹಾಕಿದ್ರು.. ಕನಸು ಕಾಣುವುದನ್ನೂ ಬಿಟ್ಟು ಕ್ಷೇತ್ರದ ಕಡೆ ಮುಖ ಮಾಡಿದ್ರು..ಆದ್ರೆ, ಮೊನ್ನೆ ಯಾವಾಗ ಸಿಎಂ ಈ ಬಗ್ಗೆ ಹೇಳಿಕೆ ಕೊಟ್ರೋ ಮತ್ತೆ ಸತಿವಾಕಾಂಕ್ಷಿಗಳ ಮನದಲ್ಲಿ ಆಸೆ ಮತ್ತೆ ಚಿಗುರೊಡೆದಿದೆ.

ಸಿಎಂ ಹೇಳಿಕೆ ಬೆನ್ನಲ್ಲೇ ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತಿನ ನಂತ್ರ ಅದಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿವೆ.. ಸಿಎಂ ದೀಪಾವಳಿ ನಂತರ ದೆಹಲಿಗೆ ಬರ್ತಾರೆ. ಅಲ್ಲಿ ಎಲ್ಲಾ ಡಿಸೈಡ್ ಆಗುತ್ತೆ ಎಂದು ಹೇಳಿದ್ದಾರೆ.. ಹೀಗಾಗಿ ಚುನಾವಣೆಯ ಹೊಸ್ತಿಲಲ್ಲಿ ಜೋಷಿಯವರು ಸಂಪುಟ ವಿಸ್ತರಣೆ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎನ್ನಲಾಗಿದೆ.

ಸಿಎಂ ಬೊಮ್ಮಾಯಿ ನಂತ್ರ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಸಂಪುಟ ವಿಸ್ತರಣೆಯ ಬಗ್ಗೆ ಸುಳಿವು ನೀಡಿದ್ದಾರೆ.. ಹೀಗಾಗಿ ಈ ಬಾರಿಯಾದ್ರೂ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಕೊಡುತ್ತಾ ಅನ್ನೋ ಪ್ರಶ್ನೆ ಮುಂದುವರೆದಿದೆ.. ಚುನಾವಣೆ ಹತ್ತಿರದಲ್ಲಿರೋದ್ರಿಂದ ಶಾಸಕರನ್ನು ಸಮಾಧಾನ ಮಾಡೋಕಾದ್ರೂ ಸಂಪುಟ ವಿಸ್ತರಣೆಯನ್ನು ಮಾಡೋಕೆ ಸಿಎಂ ಮುಂದಾಗ್ತಾರೆ ಎನ್ನಲಾಗ್ತಿದೆ.. ಆದ್ರೆ, ಸಿಎಂ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿದ ನಂತ್ರವೇ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.. ಸಂಪುಟ ವಿಸ್ತರಣೆಯ ನೆಪವಿಟ್ಟುಕೊಂಡೇ ಶಾಸಕರ ಅಸಮಾಧಾನವನ್ನ ಹೋಗಲಾಡಿಸುವ ಪ್ರಯತ್ನವೂ ಇರಬಹುದಾ ಗೊತ್ತಿಲ್ಲ.. ಅಂತೂ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೊಮ್ಮೆ ಗೂಟದ ಕಾರಿನ ಆಸೆಯನ್ನಿಟ್ಟುಕೊಂಡು ಕನಸು ಕಾಣ್ತಿರೋದು ಸುಳ್ಳಲ್ಲ.

ಇನ್ನು ಕಟ್ಟಕಡೆಯ ಆಟ ಎಂಬುವಂತೆ ಬೊಮ್ಮಾಯಿ ಕ್ಯಾಬಿನೆಟ್ ವಿಸ್ತರಣೆ ಆದರೆ ಸಚಿವ ಸ್ಥಾನಕ್ಕೆ ಒಂದು ಡಜನ್‌ಗೂ‌ ಹೆಚ್ಚು ಮಂದಿ ಕಣ್ಣಿಟ್ಟಿದ್ದಾರೆ.. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ರಾಜುಗೌಡ, ತಿಪ್ಪಾರೆಡ್ಡಿ, ಶಿವನಗೌಡ ನಾಯಕ್, ರಾಮದಾಸ್,ಪ್ರೀತಂಗೌಡ ಎಲ್ಲರೂ ಆಸೆ ಇಟ್ಕೊಂಡಿರುವವರೇ.. ಆದ್ರೆ ಸಂಪುಟ ವಿಸ್ತರಣೆ ಮಾಡಿದ್ರೂ ಪೂರ್ಣ ಪ್ರಮಾಣದಲ್ಲಿ ಮಾಡಲ್ಲ ಅನ್ನೋ‌ ಮಾತಿದೆ.. ಪ್ರಸ್ತುತ ತೀರ್ವ ಒತ್ತಡ ತರುತ್ತಿರುವ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಹಾಗೂ‌ ಸಿ.ಪಿ.ಯೋಗೇಶ್ವರ್ ಅವರಿಗೂ ಸಿಎಂ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ.. ಇನ್ನುಳಿದ ಮೂರು ಸ್ಥಾನಗಳಲ್ಲಿ ಯತ್ನಾಳ್ ಇಲ್ಲವೇ ಅರವಿಂದ ಬೆಲ್ಲದ್ ಹಾಗೂ ರಾಜುಗೌಡಗೆ ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ.. ಹಿರಿಯರು ಇದೇ ಲಾಸ್ಟ್ ಚುನಾವಣೆ ಅನ್ನೋ ಕಾರಣಕ್ಕೆ ತಿಪ್ಪಾರೆಡ್ಡಿಯವರಿಗೂ ಒಂದು ಅವಕಾಶ ಕೊಡಬಹುದು.

ಒಟ್ನಲ್ಲಿ ಕುರ್ಚಿ ಉಳಿಸಿಕೊಂಡ್ರೆ ಸಾಕು ಅನ್ನೋ ಮನಸ್ಥಿತಿಗೆ ಸಿಎಂ ಬೊಮ್ಮಾಯಿ ಬಂದಿದ್ದಾರೆ.. ಚುನಾವಣೆ ಹತ್ತಿರದಲ್ಲಿ ಇನ್ಯಾಕೆ ವಿಸ್ತರಣೆ ಅನ್ನೋ ಮಾತಿಗೆ ಹೈಕಮಾಂಡ್ ಯೋಚಿಸ್ತಿದೆ.. ಇದ್ರ ನಡುವೆ ಕೆಲವು ಶಾಸಕರು ಕ್ಷೇತ್ರದ ಕಡೆ ಗಮನ ಕೊಟ್ರೆ ಸಾಕು ಅನ್ನೋ ಮ‌ನಸ್ಥಿತಿಯಲ್ಲಿದ್ದಾರೆ..ಆದ್ರೆ, ಹಿರಿಯ ಶಾಸಕರು ಮಾತ್ರ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.. ಪಕ್ಷದ ಯಾವ ಸಭೆಗೂ ಹಾಜರಾಗದೆ ಅಸಮಾಧಾನ ಹೊರ ಹಾಕ್ತಿದ್ದಾರೆ.. ಹೀಗಾಗಿ ಇದು ಚುನಾವಣೆ ಮೇಲೆ ಎಫೆಕ್ಟ್ ಆಗಬಹುದು ಅನ್ನೋ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ಕೊಡೋ ಲೆಕ್ಕಾಚಾರ ಶುರುವಾಗಿರುವುದು ಸುಳ್ಳಲ್ಲ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES