Monday, December 23, 2024

10 ಲಕ್ಷ ಉದ್ಯೋಗ ಸೃಷ್ಟಿಯ ವಚನ ನೀಡಿದ ಮೋದಿ

ನವದೆಹಲಿ : ಎರಡು ವರ್ಷಗಳಿಂದ ಆಡಳಿತಾರೂಢ ಬಿಜೆಪಿ ವಿರುದ್ಧ ವಿಪಕ್ಷಗಳು ನಿರುದ್ಯೋಗದ ಅಸ್ತ್ರ ಬೀಸಿ ಪ್ರತಿಭಟಿಸಿದ್ದವು. ಆದ್ರೆ, ಕೇಂದ್ರ ಸರ್ಕಾರ ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ದೀಪಾವಳಿ ಸಂದರ್ಭದಲ್ಲಿ ದೇಶದ ಯುವಕರಿಗೆ ಸುಮಾರು 75,000 ಉದ್ಯೋಗದ ಉಡುಗೊರೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಟ್ಟು ಹತ್ತು ಲಕ್ಷ ಉದ್ಯೋಗ ಸೃಷ್ಟಿಯ ಪಣ ತೊಟ್ಟಿದ್ದು, ಮುಂದಿನ ದಿನಗಳಲ್ಲಿ ನಾನಾ ಇಲಾಖೆಗಳಲ್ಲಿ ಯುವಜನರಿಗೆ ಉದ್ಯೋಗ ಕಲ್ಪಿಸುವ ಕುರಿತು ವಾಗ್ದಾನ ನೀಡಿದೆ. ದೀಪಾವಳಿ ಹಬ್ಬಕ್ಕೂ ಎರಡು ದಿನ ಮುನ್ನಾ ದಿನವಾದ ಶನಿವಾರ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಮೋದಿ, ಉದ್ಯೋಗ ಮೇಳದ ಘೋಷಣೆ ಮಾಡಿದ್ರು.

ಬಳಿಕ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಎಂಟು ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳಿಂದಾಗಿ ಈ ಸಾಧನೆ ಮಾಡಿದ್ದೇವೆ. ನಮ್ಮ ಕರ್ಮಯೋಗಿಗಳ ಶ್ರಮದಿಂದ ಸರ್ಕಾರಿ ಇಲಾಖೆಗಳ ದಕ್ಷತೆ ಹೆಚ್ಚಾಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕೆಂಬ ಸಂಕಲ್ಪವನ್ನು ಈಡೇರಿಸಲು ನಾವು ಸ್ವಾವಲಂಬಿ ಭಾರತದ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದ್ರು.

ಇನ್ನು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಿಂದ ಶೇ 70% ರಷ್ಟು ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ಆರ್ಥಿಕವಾಗಿ ಬೆಂಬಲಿತವಾಗಿರುವ ಸ್ವ-ಸಹಾಯ ಗುಂಪುಗಳಿಗೆ ಎಂಟು ಕೋಟಿ ಮಹಿಳೆಯರು ಸೇರ್ಪಡೆಯಾಗಿದ್ದಾರೆ ಎಂದು ಮೋದಿ ತಿಳಿಸಿದ್ರು.

ರಕ್ಷಣಾ ಸಚಿವಾಲಯ, ರೈಲ್ವೆ ಸಚಿವಾಲಯ, ಅಂಚೆ ಇಲಾಖೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಸಿಬಿಐ, ಸುಂಕ ಮತ್ತು ಬ್ಯಾಂಕಿಂಗ್ ಹಾಗೂ ಇತರೆ ಇಲಾಖೆಗಳಲ್ಲಿ ಈ ಉದ್ಯೋಗಗಳನ್ನು ಹಂಚಿಕೆ ಮಾಡಲಾಗ್ತಿದೆ. ಪ್ರಧಾನಿ ಮೋದಿ ಆನ್‌ಲೈನ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ರೆ, ಉಳಿದಂತೆ ಕೇಂದ್ರ ಸಚಿವರು ಸಹ ದೇಶಾದ್ಯಂತ ವಿಭಿನ್ನ ನಗರಗಳಲ್ಲಿ ನಡೆಯುವ ಉದ್ಯೋಗ ಅಭಿಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರು. ಒಡಿಶಾದಲ್ಲಿ ಧರ್ಮೇಂದ್ರ ಪ್ರಧಾನ್, ಗುಜರಾತ್‌ನಲ್ಲಿ ಮನ್ಸೂಖ್ ಮಾಂಡವೀಯ, ತಮಿಳುನಾಡಿನಲ್ಲಿ ನಿರ್ಮಲಾ ಸೀತಾರಾಮನ್, ಮಹಾರಾಷ್ಟ್ರದಲ್ಲಿ ಪಿಯೂಷ್ ಗೋಯಲ್ ಸೇರಿ ಹಲವು ಕೇಂದ್ರ ಸಚಿವರು ಬೇರೆ ಬೇರೆ ರಾಜ್ಯಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಕೇವಲ ಸಚಿವರಲ್ಲದೆ ಇಂದಿನ ರೋಜ್ ಗಾರ್ ಅಭಿಯಾನಕ್ಕೆ ಬಿಜೆಪಿ ಸಂಸದರೂ ತಮ್ಮ ಸಂಸದೀಯ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.

RELATED ARTICLES

Related Articles

TRENDING ARTICLES