Monday, December 23, 2024

ವಿಮಾನಕ್ಕಿಂತ ದುಬಾರಿಯಾದ ಖಾಸಗಿ ಬಸ್ ಪ್ರಯಾಣ ದರ..!

ಬೆಂಗಳೂರು : ದೀಪಾವಳಿ ಹಬ್ಬ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರುಗಳಿಗೆ ಹೋಗುವ ಪ್ರಯಾಣಿಕರಿಂದ ಖಾಸಗಿ ಬಸ್‌ಗಳು ಹಗಲು ದರೋಡೆ ಮಾಡುತ್ತಿವೆ. ಪ್ರಯಾಣಿಕರಿಂದ ಮಿತಿಮೀರಿ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಖಾಸಗಿ ಬಸ್‌ಗಳ ಪ್ರಯಾಣ ವಿಮಾನಕ್ಕಿಂತ ದುಬಾರಿಯಾಗಿದೆ. ಇದು ಪ್ರಯಾಣಿಕರಿಗೆ ಸಿಡಿಲು ಬಡಿದಂತಾಗಿದೆ.

ಇನ್ನು ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ದರಪಟ್ಟಿಯನ್ನು ನೋಡಿದರೆ ಎಂಥವರಿಗೂ ಶಾಕ್ ಆಗಲಿದೆ. ಖಾಸಗಿ ಬಸ್‌ಗಳು ವಸೂಲಿ ಮಾಡುತ್ತಿರುವ ಪ್ರಯಾಣ ದರ ಪಟ್ಟಿಯನ್ನು ಒಮ್ಮೆ ನೋಡೋದಾದ್ರೆ.

ಬೆಂಗಳೂರು To ಬೆಳಗಾವಿ र. 750 र.4 -5 ಸಾವಿರ
ಬೆಂಗಳೂರು To ಉಡುಪಿ र. 750 र.2-3 ಸಾವಿರ
ಬೆಂಗಳೂರು To ಕಾರವಾರ र.700 र. 2-3 ಸಾವಿರ
ಬೆಂಗಳೂರು To ಉಡುಪಿ र. 700 र.2-3 ಸಾವಿರ
ಬೆಂಗಳೂರು To ಧರ್ಮಸ್ಥಳ र. 509 र.1-2 ಸಾವಿರ
ಬೆಂಗಳೂರು To ಕುಕ್ಕೆ ಸುಬ್ರಮಣ್ಯ र.523 र. 1-2 ಸಾವಿರ
ಬೆಂಗಳೂರು To ಮಡಿಕೇರಿ र. 600 र.2-3 ಸಾವಿರ
ಬೆಂಗಳೂರು To ವಿಜಯಪುರ र.650 र.1-2 ಸಾವಿರ
ಬೆಂಗಳೂರು To ಹಾಸನ र. 550 र.2-3 ಸಾವಿರ
ಬೆಂಗಳೂರು To ತಿರುಪತಿ र. 577 र. 5 -6 ಸಾವಿರ
ಬೆಂಗಳೂರು To ಶಿವಮೊಗ್ಗ र.600 र.2-3 ಸಾವಿರ

ಇನ್ನು ಈ ದರವನ್ನು ನೋಡಿದರೆ ಬಸ್‌ನಲ್ಲಿ ಹೋಗೋದಕ್ಕಿಂತ ವಿಮಾನದಲ್ಲೇ ಹೋಗಬಹುದು ಅಂತಾ ಅನ್ನಿಸದಿರಲ್ಲ. ನಮ್ಮ ಊರಿಗೂ ವಿಮಾನ ಇದ್ದಿದ್ದರೆ ಅದರಲ್ಲೇ ಹೋಗಬಹುದಿತ್ತಲ್ಲಾ ಅಂತಾ ಜನ ಅಸಹಾಯಕರಾಗಿ ಅಂಗಲಾಚುವಂತಾಗಿದೆ.

ಇನ್ನು ಹಲವಾರು ಬಾರಿ ವಾರ್ನಿಂಗ್ ಮಾಡಿ ಮೇಲೂ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿವೆ. ಆದಾಗ್ಯೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ನೆಪಮಾತ್ರಕ್ಕೆ ಮಾತ್ರ ಖಾಸಗಿ ಬಸ್ ಮಾಲೀಕರನ್ನು ಎಚ್ಚರಿಸಿ ಜಾಣಮೌನ ವಹಿಸಿದ್ದಾರೆ. ಇದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಬಸ್‌ಗಳೆಲ್ಲವೂ ಫುಲ್ ಆಗಿದ್ದು, ಹಬ್ಬಕ್ಕೆ ಹೊರಟು ನಿಂತವರಿಗೆ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವುದೇ ಸವಾಲಾಗಿದೆ. ಕಾರಣ ಯಾವುದೇ ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್‌ಗಳನ್ನು ನೋಡಿದರೂ ‘ಬಸ್‌ಗಳು ಫುಲ್’ ಎಂಬ ಮಾಹಿತಿ ಸಿಗುತ್ತದೆ. ಹಾಗೂ ಆಯಾ ಟ್ರಾವೆಲ್ಸ್‌ಗೆ ಕರೆ ಮಾಡಿದರೆ ದುಬಾರಿ ದರಗಳನ್ನು ಹೇಳುತ್ತಾರೆ. ಕೇಳಿದರೆ ಹಬ್ಬದ ಸೀಜನ್ ಇದೆ. ಎಲ್ಲರೂ ಪ್ರಯಾಣ ದರ ಹೆಚ್ಚು ಮಾಡಿದ್ದಾರೆ, ನಾವೂ ಮಾಡಿದ್ದೇವೆ ಎಂಬ ಉತ್ತರ ನೀಡುತ್ತಾರಂತೆ.. ಇನ್ನೂ ಕೆಲ ಟ್ರಾವೆಲ್ಸ್ ಸಂಸ್ಥೆಗಳು ತಾವೇ ಸೀಟುಗಳನ್ನು ಬ್ಲಾಕ್ ಮಾಡಿ ಬೇಡಿಕೆ ಸೃಷ್ಟಿಸುತ್ತಾರೆ. ಕೊನೆಯಲ್ಲಿ ಸಾವಿರಾರು ರೂಪಾಯಿಗೆ ಒಂದೊಂದು ಸೀಟು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇನ್ನು RTO. ಅಧಿಕಾರಿಗಳು ಖಾಸಗಿ ಬಸ್ ಗಳ ಪರಿಶೀಲನೆ ನಡೆಸುತ್ತಿದ್ದೇವೆ ಅಂತಿದ್ದಾರೆ.

ಇನ್ನು ಇತ್ತ ಹಬ್ಬದ ಜನದಟ್ಟಣೆ ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ. ಅದೇ ರೀತಿ ಈ ಬಾರಿಯೂ ದೀಪಾವಳಿ ಗೆ ಹೆಚ್ಚುವರಿ ಬಸ್ ಬಿಟ್ಟಿದೆ. ಆದರು ಖಾಸಗಿ ಬಸ್ ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ರೈಲಿನ ಸಂಪರ್ಕ ಹೆಚ್ಚಾಗಿ ಇರುವಂತಹ ಊರುಗಳಿಗೆ ಖಾಸಗಿ ಬಸ್‌ಗಳ ಸಂಚಾರ ಅಷ್ಟಾಗಿ ಇಲ್ಲ. ಆದರೆ, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳು ಈಗಲೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿವೆ.

ಒಟ್ಟಿನಲ್ಲಿ ಹಬ್ಬ ಬಂದರೆ ಸಾಕು ಅದನ್ನೇ ಬಂಡವಾಳ ಮಾಡಿಕೊಳ್ಳಲು ಖಾಸಗಿ ಟ್ರಾವೆಲ್ಸ್‌ಗಳು ಮುಂದಾಗ್ತಾರೆ. ಸರ್ಕಾರ ಹಾಗೂ ಆರ್ ಟಿ ಓ ಇಂತಹ ವ್ಯವಸ್ಥೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡದೇ ಜಾಣಕುರುಡು ನೀತಿ ಅನುಸರಿಸುತ್ತಿರುವುದು ದುರಂತವೇ ಸರಿ.

RELATED ARTICLES

Related Articles

TRENDING ARTICLES